
ಮಡಿಕೇರಿ: ಕೊಡಗು ಜಿಲ್ಲೆಯ ಅಯ್ಯಂಗೇರಿ ಮೂಲದ ಸಫಿಯಾ ಎಂಬ 14 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಉದ್ಯಮಿ ಕೆ.ಸಿ. ಹಂಸ (54) ಎಂಬುವರಿಗೆ ಗುರುವಾರ ಕಾಸರಗೋಡು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.
ಕಾಸರಗೋಡಿನಲ್ಲಿ ಮನೆ ಕೆಲಸಕ್ಕಿದ್ದ ಸಫಿಯಾಳನ್ನು 9 ವರ್ಷಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಗೆ ಹಂಸನಿಗೆ ಸಹಕಾರ ನೀಡಿದ ಕೆ.ಸಿ. ಹಂಸನ ಪತ್ನಿ ಮೈಮುನಾ (40) ಮತ್ತು ಅಯ್ಯಂಗೇರಿ ಗ್ರಾಮದ ಮೊಯ್ದು ಹಾಜಿಗೆ 3 ವರ್ಷಗಳ ಸೆರೆವಾಸ ಶಿಕ್ಷೆ
ವಿಧಿಸಲಾಗಿದೆ.
ಏನಿದು ಪ್ರಕರಣ?: ಕಾಸರಗೋಡಿನ ಉದ್ಯಮಿ ಹಂಸ ಎಂಬುವರ ಮನೆಗೆ ಅಯ್ಯಂಗೇರಿಯಿಂದ ಕೆಲಸಕ್ಕೆಂದು ಸಫಿಯಾ ತಂಗಿದ್ದಳು. ಹಂಸ ಗೋವಾದಲ್ಲಿ ಹೊಸದಾಗಿ ಕೊಂಡೊಕೊಂಡಿದ್ದ ಬಂಗಲೆಯ ಮನೆ ಕೆಲಸಕ್ಕೆಂದು ಸಫಿಯಾಳನ್ನು ಕರೆದೊಯ್ದಿದ್ದ. ಅಲ್ಲಿ ಆಕೆಗೆ ನಿರಂತರ ಕಿರುಕುಳ, ದೌರ್ಜನ್ಯವೆಸಗುತ್ತಿದ್ದ. ಅಡುಗೆ ಮನೆಯಲ್ಲಿ ಕುದಿಯುವ ಗಂಜಿಯನ್ನು ಕೈಮೇಲೆ ಚೆಲ್ಲಿಕೊಂಡ ಸಫಿಯಾಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬದಲು, ಪ್ರಜ್ಞೆ ತಪ್ಪಿದ ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಚಾಕುವಿನಿಂದ ಮೂರು ತುಂಡುಗಳಾಗಿ ಕತ್ತರಿಸಿದ್ದರು. ಬಳಿಕ ಶವದ ಮೂರು ಭಾಗಗಳನ್ನು ತಾನು ಹೊಸದಾಗಿ ಕಟ್ಟುತ್ತಿದ್ದ ಅಪಾರ್ಟ್‍ಮೆಂಟ್ ಕಟ್ಟಡದ ಮಣ್ಣಿನೊಳಗೆ ಹೂತುಹಾಕಿದ್ದರು. ಆದರೆ, ಈ ಕುರಿತು ಸುಳಿವು ಪಡೆದ ಕಾಸರಗೋಡು ವೊಲೀಸರು ಹಲವು ವರ್ಷ ಪ್ರಕರಣದ ಹಿಂದೆ ಬಿದ್ದು ಸಫಿಯಾಳ ಮೂಳೆಗಳನ್ನು ಪತ್ತೆಹಚ್ಚಿದರು.
Advertisement