ಖಾಸಗಿಯತ್ತ ಪ್ರವಾಸೋದ್ಯಮ

: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಫ್ರಾನ್ಸ್ ದೇಶದ ರೀತಿ ಆಗದಿರಬಹುದು. ಆದರೆ, ಆ ದಿಕ್ಕಿನಲ್ಲಿ ಹೆಜ್ಜ ಹಾಕೋಣ, ಪ್ರವಾಸೋದ್ಯಮ ನೀತಿಯಿಂದ ಹೊಸ ಅಧ್ಯಾಯ ಆರಂಭವಾಗಿದೆ. ಐದು ವರ್ಷಗಳಲ್ಲಿ ವಿಶ್ವದಲ್ಲೇ ನೆಚ್ಚಿನ ತಾಣವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಫ್ರಾನ್ಸ್ ದೇಶದ ರೀತಿ ಆಗದಿರಬಹುದು. ಆದರೆ, ಆ ದಿಕ್ಕಿನಲ್ಲಿ ಹೆಜ್ಜ ಹಾಕೋಣ, ಪ್ರವಾಸೋದ್ಯಮ ನೀತಿಯಿಂದ ಹೊಸ ಅಧ್ಯಾಯ ಆರಂಭವಾಗಿದೆ. ಐದು ವರ್ಷಗಳಲ್ಲಿ ವಿಶ್ವದಲ್ಲೇ  ನೆಚ್ಚಿನ ತಾಣವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.

ಖಾಸಗಿ ಹೋಟೆಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2015-20ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಷ್ಟು ದಿನ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಸೇವೆಗಳನ್ನು ಚೆನ್ನಾಗಿ ನೀಡಲಾಗಿಲ್ಲ. ಸತ್ಯ ಕಹಿ ಆಗಿರುತ್ತದೆ. ಅದನ್ನು ಒಪ್ಪಿಕೊಳ್ಳಲೇಬೇಕು ಎಂದ ಅವರು, ಸರ್ಕಾರಿ ವ್ಯವಸ್ಥೆ ಹೇಗಿರುತ್ತದೆಂದು ಜಗಜ್ಜಾಹಿರಾಗಿದೆ. ಹೋಟೆಲ್, ಲಾಡ್ಜ್ ಮುಂತಾದವನ್ನು ಸರ್ಕಾರ ನಡೆಸಬಾರದು, ಸರ್ಕಾರದ ಕೆಲಸವೂ ಅದಲ್ಲ. ಖಾಸಗಿಯವರಿಗೆ ಕೊಟ್ಟರೆ ಚೆನ್ನಾಗಿ ನಡೆಯುತ್ತದೆ ಎಂದರು.

ಈ ನಿಟ್ಟಿನಲ್ಲಿ ರೋಗಗ್ರಸ್ತ 18 ಪ್ರವಾಸಿ ಉದ್ಯಮವನ್ನು ಖಾಸಗಿಯವರಿಗೆ ವಹಿಸುವ ನಿಟ್ಟಿನಲ್ಲಿ ಕ್ರಮಗಳಾಗುತ್ತಿದ್ದು, ಈಗಾಗಲೇ ಇಂತಹ 7 ಉದ್ಯಮವನ್ನು ಖಾಸಗಿಯವರಿಗೆ ನೀಡಲಾಗಿದೆ. ಉಳಿದವನ್ನೂ ಶೀಘ್ರವೇ ನೀಡಲಾಗುತ್ತದೆ. ಟೆಂಡರ್ ಮೂಲಕ ಪಾರದರ್ಶಕವಾಗಿಯೇ ಖಾಸಗಿಯವರಿಗೆ ನೀಡಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಸಿಗಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಅನೇಕ ಪ್ರವಾಸಿ ತಾಣಗಳಲ್ಲಿ ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಇಲ್ಲ. ಅದೇ ರೀತಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಅವುಗಳನ್ನು ಅಭಿವೃದ್ಧಿಪಿಸಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಫ್ಪಿಕೊಳ್ಳಬೇಕು. ಇದೀಗ ಮೂಲ ಸೌಕರ್ಯ ಕಲ್ಪಿಸಲು ಅನೇಕ ಕಾರ್ಪೊರೇಟ್ ಸಂಸ್ಥೆ ಪ್ರಮುಖರು ಸ್ವಪ್ರೇರಣೆಯಿಂದ ಮುಂದೆ ಬಂದಿದ್ದಾರೆ.  ಅದೇ ರೀತಿ ಕರ್ನಾಟಕದಲ್ಲಿ ಅನೇಕ ಯೋಗ್ಯ ಪ್ರವಾಸಿ ತಾಣಗಳಿದ್ದು, ಅಭಿವೃದ್ಧಿಪಡಿಸಲು ಆಗಿರಲಿಲ್ಲ. ಈಗ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅಭಿವೃದ್ಧಿಪಡಿಸಲು ಮುಂದೆ ಬರುವವರಿಗೆ ಸರ್ಕಾರ ರಿಯಾಯಿತಿ ಉತ್ತೇಜನ ನೀಡದೇ ಹೋದರೆ ಹೂಡಿಕೆಯೂ ಆಗುವುದಿಲ್ಲ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯು ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು ಗುರುತಿಸಿದ್ದು, ಈ ತಾಣಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಒದಗಿಸಲು, ಅಭಿವೃದ್ಧಿ ಪಡಿಸಲು ಅಥವಾ ಉನ್ನತೀಕರಿಸುವ ಅವಶ್ಯ ಕತೆ ಇದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪ್ರದೀಪ್‍ಸಿಂಗ್ ಖರೋಲ ಪ್ರವಾಸೋದ್ಯಮ ನೀತಿ ಕುರಿತು ವಿವರಿಸಿದರು. ಅರಣ್ಯ ಸಚಿವ ರಮಾನಾಥ ರೈ, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ,ಸಚಿವೆ ಉಮಾಶ್ರೀ, ಟೂರಿಸಂ ವಿಷನ್ ಗ್ರೂಪ್ ನ ಅಧ್ಯಕ್ಷ ಮೋಹನ್‍ದಾಸ್ ಪೈ, ಅಪರ ಮುಖ್ಯ ಕಾರ್ಯದರ್ಶಿ ಲತಾ ಕೃಷ್ಣರಾವ್, ಮದನ್ ಗೋಪಾಲ್ ಉಪಸ್ಥಿತರಿದ್ದರು.

ಹಕ್ಕುಚ್ಯುತಿ: ಬಿಜೆಪಿ ಇಂದು ನಿರ್ಧಾರ
ಬೆಂಗಳೂರು: ಅಧಿವೇಶನ ನಡೆಯುತ್ತಿರುವಾಗ ಪ್ರವಾಸೋದ್ಯಮ ನೀತಿಯನ್ನು ಸದನದ ಹೊರಗೆ ಪ್ರಕಟಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರತಿಪಕ್ಷ ಬಿಜೆಪಿ ಹಕ್ಕುಚ್ಯುತಿ ಮಂಡನೆಗೆ ಯೋಚಿಸುತ್ತಿದೆ. ನಿಯಮಗಳ ಪ್ರಕಾರ, ಸದನ ನಡೆಯುತ್ತಿರುವಾಗ ನೀತಿ ನಿಯಮಗಳನ್ನು ಸದನದ ಹೊರಗೆ ಪ್ರಕಟಿಸುವಂತಿಲ್ಲ. ಆದರೆ, ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ರಾಜ್ಯ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಿದ್ದರು. ಕಾರ್ಪೊರೇಟ್ ಕಂಪನಿಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ತೊಡಗಿಸುವ ನಿರ್ಧಾರ ಬಹಿರಂಗಪಡಿಸಿದ್ದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ, ಹಕ್ಕಚ್ಯುತಿ ಮಂಡನೆಗೆ ಯೋಚಿಸಿದ್ದು, ಇಂದು ನಿರ್ಧಾರ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com