ಅಕ್ರಮ ಪತ್ತೆ ಹಚ್ಚಿದ ಅಧಿಕಾರಿಗೆ ಎತ್ತಂಗಡಿಯ ಉಡುಗೊರೆ

ಪಶುಸಂಗೋಪನಾ ಇಲಾಖೆಯಲ್ಲಿ ನೈಟ್ರೋಜನ್ ಗ್ಯಾಸ್ ಕಂಟೇನರ್ ಖರೀದಿಯಲ್ಲಿ ರು. 10 ಕೋಟಿಗೂ ಹೆಚ್ಚಿನ ಅಕ್ರಮ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಪಶುಸಂಗೋಪನಾ ಇಲಾಖೆಯಲ್ಲಿ ನೈಟ್ರೋಜನ್ ಗ್ಯಾಸ್ ಕಂಟೇನರ್ ಖರೀದಿಯಲ್ಲಿ ರು. 10 ಕೋಟಿಗೂ ಹೆಚ್ಚಿನ ಅಕ್ರಮ ನಡೆದಿದೆ. ಈ ಅಕ್ರಮ ಪತ್ತೆ ಹಚ್ಚಿದ ಅಧಿಕಾರಿ ವರ್ಗಾವಣೆಯಾದ ನಂತರ ಬೆಳಕಿಗೆ ಬಂದಿದೆ. ಜಾನುವಾರುಗಳ ತಳಿ ಅಭಿವೃದ್ಧಿಗಾಗಿ ಅವುಗಳ ವೀರ್ಯ ಸಂಗ್ರಹಿಸಲು ನೈಟ್ರೋಜನ್ ಗ್ಯಾಸ್ ಕಂಟೇನರ್ ಖರೀದಿಗೆ ಇಲಾಖೆ ನಡೆಸಿದ ಟೆಂಡರ್‍ನಲ್ಲಿ ಕಡಿಮೆ ದರಕ್ಕೆ ಕಂಟೇನರ್ ಪೂರೈಸುವ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ದೂರವಿಟ್ಟು ಖಾಸಗಿ ಸಂಸ್ಥೆಗೆ ಅವಕಾಶ ನೀಡಿರುವುದು ಪತ್ತೆಯಾಗಿದೆ. ಇದರಿಂದ ರು.10 ಕೋಟಿಗೂ ಅಧಿಕ ಅಕ್ರಮ ನಡೆದಿದ್ದು, ಇಲಾಖೆ ಹಿರಿಯ ಅಧಿಕಾರಿಗಳು ಶಾಮೀಲಾಗಿರುವುದುಪತ್ತೆಯಾಗಿದೆ. ಅಕ್ರಮ ತಿಳಿದ ಸಚಿವರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಟೆಂಡರ್ ರದ್ದುಪಡಿಸಿದ್ದಾರೆ. ಆದರೆ ಈ ಎಲ್ಲಾ ಅಕ್ರಮಗಳನ್ನು ಪತ್ತೆ ಮಾಡಿದ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ, ತಪ್ಪಿತಸ್ಥರ ವಿರುದ್ಧವಿಚಾರಣೆಗೆ ಶಿಫಾರಸು ಮಾಡಿದ ಬಳಿಕ ಎತ್ತಂಗಡಿಯಾಗಿದ್ದಾರೆ. ಅಷ್ಟೇ ಅಲ್ಲ. ಅವರಿಗೆ ಯಾವುದೇ ಹುದ್ದೆಯನ್ನೂ ನೀಡಿಲ್ಲ. ಇದರಿಂದ ಬೇಸತ್ತ ಅವರು ಇಲಾಖೆಯಲ್ಲಿ ಪತ್ತೆ ಮಾಡಿರುವ ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದರ
ಪ್ರತಿ ಕನ್ನಡಪ್ರಭಗೆ ಲಭ್ಯವಾಗಿದೆ.

ಏನಿದು ರು.ಕೋಟಿ ಅಕ್ರಮ?
ಜಾನುವಾರಗಳ ವೀರ್ಯವನ್ನು ನೈಟ್ರೋಜನ್ ಗ್ಯಾಸ್‍ನೊಂದಿಗೆ ಕನಿಷ್ಠ ಉಷ್ಣಾಂಶದಲ್ಲಿ ಶೇಖರಿಸಬೇಕಿದ್ದು, ಇದಕ್ಕಾಗಿ 6000 ಲೀಟರ್ ಗಾತ್ರದ ಕಂಟೇನರ್‍ಗಳನ್ನು ಖರೀದಿಸಲು ಇಲಾಖೆ 2014ರಲ್ಲಿ ಮುಂದಾಗಿತ್ತು. ಪ್ರತಿ ಜಿಲ್ಲೆಗೊಂದು ಕಂಟೇನರ್ ಬೇಕಿದ್ದರಿಂದ ಇಲಾಖೆ 30 ಕಂಟೇನರ್ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಿತು. ಆಗ ಇಂಡಿಯನ್ ಆಯಿಲ್ ಕಾರ್ಫೋರೇಷನ್ ಸಂಸ್ಥೆ ಪ್ರತಿ ಕಂಟೇನರ್ ಅನ್ನು ರು. 22ಲಕ್ಷ ದರದಲ್ಲಿ ಪೂರೈಸುವುದಾಗಿ ಹೇಳಿತ್ತು. ಹಾಗೆಯೇ ಗ್ಲೋಬಲ್ ಎಂಜಿನಿಯರಿಂಗ್ ಕಂಪನಿ ಪ್ರತಿ ಕಂಟೇನರ್‍ಗೆ ರು. 45ಲಕ್ಷದಂತೆ ನೀಡುವುದಾಗಿ ಪ್ರಕಟಿಸಿತ್ತು. ನಿಯಮದಂತೆ ಇಲಾಖೆ ಅಧಿಕಾರಿಗಳು ಕಡಿಮೆ ದರ ನಿಗದಿ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್‍ಗೆ ಪೂರೈಸುವಂತೆ ಕಾರ್ಯಾದೇಶ ನೀಡಬೇಕಿತ್ತು. ಆದರೆ ಅಧಿಕಾರಿಗಳು ಹೆಚ್ಚು ದರ ವಿಧಿಸಿದ್ದಗ್ಲೋಬಲ್ ಎಂಜಿನಿಯರ್ ಕಂಪನಿಯ ದರವನ್ನು  ಒಪ್ಪಿಕೊಂಡು ರು.14ಕೋಟಿ ವೆಚ್ಚದಲ್ಲಿ 30 ಕಂಟೇನರ್ ಖರೀದಿಗೆ ನಿರ್ಧರಿಸಿತ್ತು. ಇದರಿಂದ ಸರ್ಕಾರಕ್ಕೆ ರು.7ಕೋಟಿ ನಷ್ಟ ಆಗುತ್ತಿತ್ತು. ಆದರೂ ಅಧಿಕಾರಿಗಳು ಕಂಟೇನರ್ ಖರೀದಿಗೆ ಆದೇಶ ನೀಡಿದ್ದರು.

ರು.5.2ಕೋಟಿಯ ಮತ್ತೊಂದು ಅಕ್ರಮ!
ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜಾನುವಾರ ವೀರ್ಯ ಸಂಗ್ರಹಕ್ಕಾಗಿ ಮತ್ತೆ 55 ಲೀಟರ್ ಸಾಮರ್ಥ್ಯದ 4000ಕಂಟೇನರ್ ಖರೀದಿಸುವುದಕ್ಕೂ ಅಧಿಕಾರಿಗಳು ಮುಂದಾಗಿದ್ದರು. ಇಲ್ಲಿ ಪ್ರತಿ ಕಂಟೇನರ್‍ಗೆ ರು. 6000ದಂತೆ ನೀಡಲು ಮುಂದಾಗಿದ್ದ ಐಒಸಿಗೆ ಗುತ್ತಿಗೆ ನೀಡದೆ ರು. 14,000 ದರ ವಿಧಿಸಿದ್ದ ಗ್ಲೋಬಲ್ ಎಂಜಿನಿಯರಿಂಗ್ ಕಂಪನಿಗೆ ಅಧಿಕಾರಿಗಳು ಕಾರ್ಯಾದೇಶ ನೀಡಿದ್ದರು. ಇದರಿಂದ ಇಲಾಖೆಗೆ ಸುಮಾರು ರು.2.5ಕೋಟಿ ನಷ್ಟವಾಗು ವಾಗುತ್ತಿತ್ತು ಎಂಬುದು ಪ್ರಾಥಮಿಕತನಿಖೆಯಿಂದ ತಿಳಿದುಬಂದಿತ್ತು. ಹೀಗಾಗಿ ತಪ್ಪಿತಸ್ಥರ ವಿರುದ್ಧ ವಿಚಾರಣೆಗೆ ಶಿಫಾರಸು ಮಾಡಲಾಗಿದ್ದು, ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಲುಪಿತು. ಆದರೆ ಅವರು ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಕಂಟೇನರ್ ಖರೀದಿ ತಡೆದಿದ್ದಾರೆಯೇ ವಿನಃ ಈ ಅಕ್ರಮದಲ್ಲಿ ತಪ್ಪುಮಾಡಿದ ಅಧಿಕಾರಿಗಳ ವಿರುದ್ದ ಯಾವುದೇ ಕ್ರಮಕೈಗೊಳ್ಳಲಿಲ್ಲ. ಹೀಗಾಗಿ ಪ್ರಕರಣ ಮುಚ್ಚಿ ಹೋಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.




ವರ್ಗಾವಣೆಗೆ ಸಮಿತಿ ರಚನೆಯಾಗಿಲ್ಲ

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹಿರಿಯ ಅಧಿಕಾರಿಗಳ ವರ್ಗಾವಣೆ ಕುರಿತು ಚರ್ಚಿಸಲು ಸರ್ಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ನಾಗರಿಕ ಸೇವಾ ಕಾಯ್ದೆಯ ನಿಯಮ ರೂಪಿಸಬೇಕು. ಇದು ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿದೆ. ಆದರೆ ರಾಜ್ಯದಲ್ಲಿ ಇನ್ನೂ ನಿಯಮವನ್ನೇ ಮಾಡುವ ಪ್ರಯತ್ನ ಆಗಿಲ್ಲ. ಹೀಗಾಗಿಕೆಲವು ಅಧಿಕಾರಿಗಳನ್ನು ರಾಜ್ಯದಲ್ಲಿ ಅತ್ಯಂತ ಕಡಿಮೆ ಅವಧಿಗೆ ಎತ್ತಂಗಡಿ ಮಾಡಲಾಗುತ್ತಿದೆ. ಅಂಥವರ ಸಾಲಿಗೆ ಈಗ ಹರ್ಷಗುಪ್ತಾಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com