
ಬೆಂಗಳೂರು: ಪರವಾನಗಿ ಪಡೆದು ಪಿಸ್ತೂಲ್ ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಆಯಾ ಸರಹದ್ದಿನ ಪೊಲೀಸ್ ಠಾಣೆಗೆ ಮರಳಿಸುವಂತೆ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಆದೇಶಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಘೋಷಣೇಯಾಗಿರುವ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಶಸ್ತ್ರಾಸ್ತ್ರ ಹೊಂದಿರುವ ಖಾಸಗಿ ವ್ಯಕ್ತಿಗಳು ಆ.10 ಒಳಗೆ ಪೊಲೀಸರ ವಶಕ್ಕೆ ಒಪ್ಪಿಸಬೇಕು. ಚುನಾವಣೆ ಮುಗಿದ ನಂತರ ಆ.26 ನಂತರ ಸಂಬಂಧಿಸಿದ ದಾಖಲೆ ಒದಗಿಸಿ ವಾಪಸ್ ಪಡೆಯಬಹುದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಆದೇಶದಲ್ಲಿ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ಅಗತ್ಯವಿದ್ದಲ್ಲಿ ಅಂತಹ ವ್ಯಕ್ತಿಗಳು ಆ.10 ರ ಒಳಗೆ ಸ್ಪಷ್ಟ ಕಾರಣವನ್ನು ಲಿಖಿತ ರೂಪದಲ್ಲಿ ಆಯಾ ವಿಭಾಗದ ಡಿಸಿಪಿಗೆ ಮನವಿ ಸಲ್ಲಿಸಬೇಕು. ಪರಿಶೀಲನೆ ಬಳಿಕ ದಿಸ್ಪಿ ಅವರು ಶಸ್ತ್ರಾಸ್ತ್ರ ಶರಣಾಗತಿಗೆ ವಿನಾಯಿತಿ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧಾರ ಮಾಡಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆ ಅಧಿಕಾರಿಗಳು ಭದ್ರತೆ ದೃಷ್ಟಿಯಿಂದ ಅನುಮತಿ ನೀಡಲಾಗಿರುವ ಬ್ಯಾಂಕ್ ಗಳು, ಸೆಕ್ಯುರಿಟಿ ಏಜೆನ್ಸಿ ಮುಂತಾದ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ಲಾಸ್-1 ಗೆಜೆಟೆಡ್ ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ಶರಣಾಗತಿ ಆದೇಶ ಅನ್ವಯ ಆಗುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
Advertisement