ನ್ಯಾ.ಮಜಗೆ ಆರೋಪದಲ್ಲಿ ಹುರುಳಿಲ್ಲ: ನ್ಯಾ.ಅಡಿ ಸ್ಪಷ್ಟನೆ
ಬೆಂಗಳೂರು: ಡಾ. ಶೈಲಾ ಪಾಟೀಲ್ ಅವರ ವಿರುದ್ಧ ಔಷಧಿಗಳ ದುರ್ಬಳಕೆ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆಂದು ನಿವೃತ್ತಿಯ ದಿನ ಉಪಲೋಕಾಯುಕ್ತ ನ್ಯಾ. ಎಸ್.ಬಿ.ಮಜಗೆ ಅವರು ತಮ್ಮ ವಿರುದ್ಧ ಮಾಡಿರುವ ಆರೋಪ ಆಧಾರರಹಿತ ಎಂದು ಉಪ ಲೋಕಾಯುಕ್ತ ನ್ಯಾ. ಸುಭಾಷ್.ಬಿ.ಅಡಿ ಹೇಳಿದ್ದಾರೆ.
ಸೋಮವಾರ ಲೋಕಾಯುಕ್ತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ವಿಭಾಗದ ವೈದ್ಯಾಧಿಕಾರಿ ಡಾ. ಶೈಲಾ ಪಾಟೀಲ್ ಅವರ ವಿರುದ್ಧ ಇದ್ದ ಔಷಧಗಳ ದುರುಪಯೋಗ ಆರೋಪದ ಪ್ರಕರಣದಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ, ಹಾಗೂ ಲೋಕಾಯುಕ್ತ ವೈದ್ಯಕೀಯ ವಿಚಕ್ಷಣಾ ದಳ ನಿರ್ದೇಶಕರು ತನಿಖೆ ನಡೆಸಿ ವರದಿ ಕಳುಹಿಸಿದ್ದರು.
ಪರಿಶೀಲನೆ ನಡೆಸಿದಾಗ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ. ಹೀಗಾಗಿ, ಡಾ.ಶೈಲಾ ಪಾಟೀಲ್ ಪಾತ್ರ ಇಲ್ಲವೆಂದು ಅಧಿಕಾರಿಗಳಿಂದ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ, ಪ್ರಕರಣವನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೆ. ಯಾರ ಹಿತವನ್ನು ಕಾಪಾಡಿಲ್ಲ. ಡಾ.ಶೈಲಾ ಪಾಟೀಲ್ ಯಾರು ಎನ್ನುವುದೇ ಗೊತ್ತಿರಲಿಲ್ಲ ಎಂದು ಅವರು ಹೇಳಿದರು.
ಶಿಫಾರಸು ಪರಿಗಣಿಸಿದ ಸರ್ಕಾರ ವರದಿ ಒಪ್ಪಿಕೊಂಡು 2015ರ ಜನವರಿ ತಿಂಗಳಲ್ಲಿ ವಾಪಸ್ ನ್ಯಾ.ಮಜಗೆ ಅವರಿಗೆ ಕಳುಹಿಸಿತ್ತು. ಅದನ್ನು ಸ್ವೀಕರಿಸಿದ ನ್ಯಾ.ಮಜಗೆ, ರಿಜಿಸ್ಟ್ರಾರ್ ಕಳುಹಿಸಿದ್ದರು. ಆದರೆ, ತಮಗೆ ಸಂಬಂಧಿಸಿದ ಕಡತ, ನನ್ನ ಚೇಂಬರ್ ಗೆ ಹೋಗಿದ್ದು ಹೇಗೆ ಎನ್ನುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಂತರಿಕ ತನಿಖೆ ನಡೆಸಲು ನ್ಯಾ.ಮಜಗೆ ಆದೇಶಿಸಿದ್ದರು. ಪ್ರಕರಣದ ವರದಿ ಅವರ ಮುಂದೆ ಬಂದಿತ್ತು. ತಮ್ಮದೇ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಬಳಿಕ ಅದರ ಬಗ್ಗೆ ಯಾವುದೇ ಮಾತನಾಡದೇ ಕೊನೆಯ ದಿನ ಏಕಾಏಕಿ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದರು.
ಎಲ್ಲವೂ ಪಾರದರ್ಶಕವಾಗಿ ಇರುವಾಗ ನನ್ನ ವಿರುದ್ಧ ನ್ಯಾ.ಮಜಗೆ ಅವರು ನಿವೃತ್ತಿಯ ದಿನ ಯಾಕೆ ಆರೋಪ ಮಾಡಿದರೋ ಗೊತ್ತಿಲ್ಲ. ಒಂದು ವೇಳೆ ನಾನು ಸರ್ಕಾರಕ್ಕೆ ಕಳುಹಿಸಿರುವ ವರದಿ ಬಗ್ಗೆ ಅನುಮಾನ ಇದ್ದರೆ ಲೋಕಾಯುಕ್ತ ಕಾನೂನು ಸೆಕ್ಷೆನ್ 12(5)ರ ಪ್ರಕಾರ ರಾಜ್ಯಪಾಲರಿಗೂ ವರದಿ ಸಲ್ಲಿಸಬಹುದಿತ್ತು. ಹೀಗೆ, ಮಾಡುವ ಬದಲು ನನ್ನ ವಿರುದ್ದ ಯಾಕೆ ಆರೋಪ ಮಾಡಿದರೂ ಎಂದು ನ್ಯಾ.ಅಡಿ ಅಚ್ಚರಿ ವ್ಯಕ್ತಪಡಿಸಿದರು.
ಏನಿದು ಪ್ರಕರಣ?
ಧಾರವಾಡ ವಿಭಾಗದ ವೈದ್ಯಾಧಿಕಾರಿ ಆಗಿರುವ ಶೈಲಾ ಪಾಟೀಲ್ ಅವರು ತಮ್ಮ ಖಾಸಗಿ ಕ್ಲೀನಿಕ್‍ನಲ್ಲಿ ಸರ್ಕಾರದ ಔಷಧಗಳನ್ನು ಹೊಂದಿರುವ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿ ಡಾ.ಶೈಲಾ ಅವರ ಕ್ಲಿನಿಕ್
ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವ 2 ಪೊಲಿಯೋ ಬಾಟಲಿಗಳು ಸಿಕ್ಕಿದ್ದವು.
ಇನ್ನು 5 ಬಾಟಲಿಗಳು ಕ್ಲಿನಿಕ್‍ನ ಹೊರ ಭಾಗದಲ್ಲಿ ಸಿಕ್ಕಿದ್ದವು. ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಿರೆಂದು ವಿಧಾನ ಪರಿಷತ್ ಸದಸ್ಯ ನಿಮ್ಮ ರಾಜಿನಾಮೆ ಕೇಳಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನ್ಯಾ. ಸುಭಾಷ್ ಬಿ.ಅಡಿ, ನಾನು ನ್ಯಾಯಮೂರ್ತಿ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ನಾನು ರಾಜಕಾರಣಿಯಲ್ಲ ಎಂದು ಉತ್ತರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ