ಬಿಹಾರದ ವೃದ್ಧನಿಗೆ ಮಂಡ್ಯದವನ ಹೃದಯ

ಕೈಗಾರಿಕಾ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಮಂಡ್ಯ ಮೂಲದ ಯುವಕನೊಬ್ಬ ಹೃದಯ ಬಿಹಾರದ ಪಾಟ್ನಾ ಮೂಲದ ವೃದ್ಧನ ದೇಹದ ಹೃದಯ ಬಡಿತವಾಗಿದೆ...
ಅಂಗಾಂಗ ದಾನ ಮಾಡಿದ ಮಂಡ್ಯ ಮೂಲದ ಯುವಕ ಚೇತನ್
ಅಂಗಾಂಗ ದಾನ ಮಾಡಿದ ಮಂಡ್ಯ ಮೂಲದ ಯುವಕ ಚೇತನ್

ಬೆಂಗಳೂರು: ಕೈಗಾರಿಕಾ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಮಂಡ್ಯ ಮೂಲದ ಯುವಕನೊಬ್ಬ ಹೃದಯ ಬಿಹಾರದ ಪಾಟ್ನಾ ಮೂಲದ ವೃದ್ಧನ ದೇಹದ ಹೃದಯ ಬಡಿತವಾಗಿದೆ.

ಗುರುವಾರ ಸಂಜೆ ನಾರಾಯಣ ಹೃದಯಾಲಯದಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಈ ಮೂಲಕ ಉದ್ಯಾನಗರಿ ಬೆಂಗಳೂರು ಮತ್ತೊಂದು ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾಯಿತು. ಬನ್ನೇರುಘಟ್ಟ ರಸ್ತೆ ಸಾಗರ ಆಸ್ಪತ್ರೆಯಿಂದ ಹೊಸೂರು ರಸ್ತೆ ನಾರಾಯಣ ಹೃದಯಾಲಯದವರೆಗೆ ಸಂಚಾರ ಪೊಲೀಸರು `ಗ್ರೀನ್ ಕಾರಿಡಾರ್' ನಿರ್ಮಿಸಿದ್ದು 24 ಕಿಮೀ ಮಾರ್ಗವನ್ನು ಆ್ಯಂಬುಲೆನ್ಸ್ 25 ನಿಮಿಷಗಳಲ್ಲಿ ಕ್ರಮಿಸಿತ್ತು.

ಮಂಡ್ಯ ಮೂಲದ ಚೇತನ್ ಎಂಬುವರು ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 15ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅವರು ಧರಿಸಿದ್ದ ಅಂಗಿ ಯಂತ್ರದೊಳಗೆ ಸಿಲುಕಿದ ಕಾರಣ ಕತ್ತು ಬಿಗಿದು ಹೋಗಿ ಉಸಿರುಗಟ್ಟಿದಂತಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಚೇತನ್ ಅವರ ಕಾರ್ವಿಕಲ್ ಸ್ಪೈನಲ್ ಕಾರ್ಡ್(ಬೆನ್ನು ಹುರಿ) ಗಂಭೀರ ಪೆಟ್ಟಾಗಿದ್ದ ಕಾರಣ ಮೆದುಳು ಕಾರ್ಯ ನಿರ್ವಹಣೆ ನಿಲ್ಲಿಸಿದೆ ಎಂದು ಜುಲೈ 22ರಂದು ವೈದ್ಯರು ಘೋಷಿಸಿದ್ದರು.

ಮಗ ಚೇತನ್ ಸಾವಿನಿಂದ ವಿಚಲಿತರಾದ ತಂದೆ ಮದ್ದೂರು ಗ್ರಾಮದ ಎಂ.ರಾಮಣ್ಣ ಅವರು ತಾವಾಗಿಯೇ ಮುಂದೆ ಬಂದು ಆತನ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದರು. ಈ ವೇಳೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪಾಟ್ನಾ ಮೂಲದ 63 ವರ್ಷದ ವ್ಯಕ್ತಿಯೊಬ್ಬರು ಹೃದಯದ ಅಗತ್ಯತೆ ಇರುವುದು ಗುರುತಿಸಲಾಯಿತು. ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದ ಅವರು ಕಳೆದ 110 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಕಸಿ ಮಾಡಿಸುವುದೊಂದೆ ಪರಿಹಾರವೆಂದು ವೈದ್ಯರು ತಿಳಿಸಿದ್ದರು. ಹೀಗಾಗಿ, ಮೆದುಳು ನಿಷ್ಕ್ರಿಯಗೊಂಡಿದ್ದ ಚೇತನ್ ಅವರ ಹೃದಯವನ್ನು ಅವರಿಗೆ ಕಸಿ ಮಾಡಲು ತೀರ್ಮಾನಿಸಲಾಗಿತ್ತು.

ಗುರುವಾರ ಮಧ್ಯಾಹ್ನ 2.12ಕ್ಕೆ ಹೃದಯವನ್ನು ಹೊತ್ತ ಆ್ಯಂಬುಲೆನ್ಸ್ ಬನ್ನೇರುಘಟ್ಟ ರಸ್ತೆ ಸಾಗರ್ ಆಸ್ಪತ್ರೆಯಿಂದ ಹೊರಟು 2.37ಕ್ಕೆ ನಾರಾಯಣ ಹೃದಯಾಲಯ ತಲುಪಿತು. ಅದಕ್ಕಾಗಿ ಸಂಚಾರ ಪೊಲೀಸರು ಗ್ರೀನ್ ಕಾರಿಡಾರ್ ನಿರ್ಮಿಸಿದ್ದರು. 24 ಕಿ.ಮೀ. ಮಾರ್ಗ 25 ನಿಮಿಷಗಳಲ್ಲಿ ತಲುಪಿತು.

ಒಂದು ವೇಳೆ ಸಾಮಾನ್ಯ ಟ್ರಾಫಿಕ್ ಆಗಿದ್ದರೆ 45ರಿಂದ 60 ನಿಮಿಷ ಬೇಕಾಗುತ್ತದೆ. ಇದೇ ವೇಳೆ ಚೇತನ್ ದೇಹದ ಕಿಡ್ನಿ, ಲೀವರ್ ಮತ್ತು ಕಾರ್ನಿಯಾಗಳನ್ನು ಕಸಿ ಮಾಡಲಾಗಿದೆ. ಲಿವರ್ ಮತ್ತು ಕಿಡ್ನಿಗಳನ್ನು ಅಪೊಲೋ ಆಸ್ಪತ್ರೆ ರೋಗಿಗೆ ಮತ್ತೊಂದು ಕಿಡ್ನಿಯನ್ನು ಸಾಗರ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಕಾರ್ನಿಯಾ ಮತ್ತೊಂದು ಆಸ್ಪತ್ರೆಯಲ್ಲಿದ್ದ ಇಬ್ಬರು ರೋಗಿಗಳಿಗೆ ಅಳವಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com