ಲಿಕ್ಕರ್ ಮಾರಾಟಕ್ಕೆ ಅನುಮತಿ: ನಿಲುವು ತಿಳಿಸಲು ಸೂಚನೆ

ನಗರದ ರೆಸಿಡೆನ್ಸಿ ರಸ್ತೆಯ ಬೆಂಗಳೂರು ಕ್ಲಬ್ ಗೆ ಒಂದು ತಿಂಗಳ ಕಾಲ ವಿದೇಶಿ ಕಂಪನಿಯ ಭಾರತೀಯ ತಯಾರಿಕಾ ಮದ್ಯ (ಲಿಕ್ಕರ್) ಮಾರಾಟ ಮಾಡಲು ಅನುಮತಿ ನೀಡುವ ಕುರಿತು ಜುಲೈ 28ರಂದು ಸ್ಪಷ್ಟ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯ ಬೆಂಗಳೂರು ಕ್ಲಬ್ ಗೆ ಒಂದು ತಿಂಗಳ ಕಾಲ ವಿದೇಶಿ ಕಂಪನಿಯ ಭಾರತೀಯ ತಯಾರಿಕಾ ಮದ್ಯ (ಲಿಕ್ಕರ್) ಮಾರಾಟ ಮಾಡಲು ಅನುಮತಿ ನೀಡುವ ಕುರಿತು ಜುಲೈ 28ರಂದು ಸ್ಪಷ್ಟ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.

ಲಿಕ್ಕರ್ ಮಾರಾಟ ಮಾಡಲು ನೀಡಿದ್ದ ಅನುಮತಿ ರದ್ದುಗೊಳಿಸಿ ಅಬಕಾರಿ ಆಯುಕ್ತರು ಜು.1 ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಕ್ಲಬ್ ಹೈ ಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಜಿ. ರಮೇಶ್ ಅವರಿದ್ದ ಏಕಸದಸ್ಯ ಪೀಠ, ಸರ್ಕಾರಕ್ಕೆ ಈ ಸೂಚನೆ ನೀಡಿ ವಿಚಾರಣೆಗಾಗಿ ಜು.28ರಂದು ಮುಂದೂಡಿದೆ.

ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ಬೆಂಗಳೂರು ಕ್ಲಬ್ ನೋಂದಣಿಯಾಗದ ಕ್ಲಬ್ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಕ್ಲಬ್ ಗೆ ಮಾನ್ಯತೆಯೇ ಇಲ್ಲ. ಅಲ್ಲದೇ ಸದ್ಯ ಅರ್ಜಿ ಕ್ಲಬ್ ಅಥವಾ ಸಂಸ್ಥೆ ಹೆಸರಲ್ಲಿ ದಾಖಲಾಗಿದೆಯೇ ಹೊರತು ಒಬ್ಬ ವ್ಯಕ್ತಿಯ ಹೆಸರಲ್ಲಿ ಅಲ್ಲ. ಆದ್ದರಿಂದ ಈ ಅರ್ಜಿ ರಿಟ್ ವ್ಯಾಪ್ತಿಗೆ ಆಗಮಿಸುವುದಿಲ್ಲ ಮತ್ತು ಈ ಅರ್ಜಿ ರಿಟ್ ಅರ್ಜಿಯಾಗಿ ವಿಚಾರಣೆ ನಡೆಸಲು ಯೋಗ್ಯವಲ್ಲ. ಅಲ್ಲದೆ, ಕ್ಲಬ್ ಕರ್ನಾಟಕ ರಾಜ್ಯ ಅಬಕಾರಿ ನಿಯಮಗಳನ್ನು ಅಳವಡಿಸಿಕೊಂಡಿಲ್ಲ. ಇದರಿಂದ ಲಿಕ್ಕರ್ ಸರಬರಾಜು ಮಾಡಲು ಅನುಮತಿ ನಿರಾಕರಿಸಲಾಗಿದೆ. ಪ್ರಕರಣವನ್ನು ಕೋರ್ಟ್ ಕಾನೂನು ಪ್ರಕಾರ ವಿಚಾರಣೆ ನಡೆಸಿ ತೀರ್ಮಾನಿಸಲಿ. ಕಾನೂನು ವ್ಯಾಪ್ತಿಯಲ್ಲಿ ಯಾವುದಾದರೂ ಸೌಲಭ್ಯ ಪಡೆಯಲು ಅವಕಾಶವಿದ್ದಲ್ಲಿ ಕ್ಲಬ್ ಪಡೆಯಬಹುದು ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ಕ್ಲಬ್ ಪರ ವಕೀಲರು. 2009ರಿಂದ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗಿತ್ತು. ಪರವಾನಗಿಗೆ ರು.5ಲಕ್ಷ ಸಹ ಪಾವತಿಸಿದ್ದು, ಈಗ ದಿಢೀರ್ ಎಂದು ಲಿಕ್ಕರ್ ಮಾರಾಟಕ್ಕೆ ಅನುಮತಿ ರದ್ದುಗೊಳಿಸಿರುವುದು ಸರಿಯಲ್ಲ. ಮೇಲಾಗಿ ಕರ್ನಾಟಕ ರಿಜಿಸ್ಟ್ರೇಷನ್ ಆಫ್ ಸೊಸೈಟೀಸ್ ಆ್ಯಕ್ಟ್ ಅಡಿಯಲ್ಲಿ ಕ್ಲಬ್ ನೋಂದಣಿ ಮಾಡಬೇಕಾದರೆ, ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ. ಸಭೆ ಕರೆಯಲು ಕನಿಷ್ಠ ಮೂರು ವಾರ ಕಾಲಾವಕಾಶ ಹಿಡಿಯಲಿದೆ ಎಂದು ತಿಳಿಸಿದರು.

ಈ ಕಾರಣ ಪರಿಗಣಿಸಿ ಕನಿಷ್ಠ ಒಂದು ತಿಂಗಳ ಕಾಲ ಲಿಕ್ಕರ್ ಮಾರಾಟ ಮಾಡಲು ತಾತ್ಕಾಲಿಕ ಅನುಮತಿ ನೀಡಬೇಕು ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅವರು ಸರ್ಕಾರದ ನಿಲುವು ಕೇಳಿ ವಿಚಾರಣೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com