ಅಶ್ವಿನ್ ಬಂಧನಕ್ಕೆ ಮೀನಾಮೇಶ ಏಕೆ?

ಹೆಚ್.ಎಸ್ ದೊರೆಸ್ವಾಮಿ ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಹಗರಣದಲ್ಲಿ ಮೊದಲನೇ ಆರೋಪಿಯಾಗಿರುವ ಅಶ್ವಿನ್ ರಾವ್ ಅವರನ್ನು ಬಂಧಿಸದಿರುವ ಬಗ್ಗೆ ಅಸಮಾಧಾವ ವ್ಯಕ್ತಪಡಿಸಿದ್ದಾರೆ.
ಹೆಚ್.ಎಸ್ ದೊರೆಸ್ವಾಮಿ(ಸಂಗ್ರಹ ಚಿತ್ರ)
ಹೆಚ್.ಎಸ್ ದೊರೆಸ್ವಾಮಿ(ಸಂಗ್ರಹ ಚಿತ್ರ)

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಹಗರಣದಲ್ಲಿ ಮೊದಲನೇ ಆರೋಪಿಯಾಗಿರುವ ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಅವರನ್ನು ಬಂಧಿಸದಿರುವ ಬಗ್ಗೆ ಅಸಮಾಧಾವ ವ್ಯಕ್ತಪಡಿಸಿರುವ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಎಸ್.ಐ.ಟಿ ತಂಡದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಎಸ್.ಐ.ಟಿ ಮುಖ್ಯಸ್ಥ ಎಡಿಜಿಪಿ ಕಮಲ್ ಪಂತ್ ಅವರನ್ನು ಭೇಟಿ ಮಾಡಿದ ದೊರೆಸ್ವಾಮಿ ಪ್ರಮುಖ ಆರೋಪಿ ಅಶ್ವಿನ್ ರಾವ್ ನ್ನು ಬಂಧಿಸದೆ ಇರುವ ಬಗ್ಗೆ ರಾಜ್ಯದ ಜನತೆಯಲ್ಲಿ ಅನುಮಾನ ಉಂಟಾಗುತ್ತಿದೆ. ಹೀಗಾಗಿ ಅವರ ಬಂಧನಕ್ಕೆ ಇರುವ ತೊಡಕುಗಳೇನು ಎಂಬುದರ ಬಗ್ಗೆ ಪ್ರಶ್ನಿಸಿದ್ದಾರೆ.  

ಪ್ರಕರಣದ ಸೂಕ್ತ ಸಾಕ್ಷ್ಯಾಧಾರಗಳನ್ನು ಕಳೆಹಾಕಲಾಗುತ್ತಿದೆ. ಮಾಧ್ಯಮಗಳ ವರದಿ ಅಥವಾ ಊಹಾಪೋಹ ಹೇಳಿಕೆಗಳ ಆಧಾರದ ಮೇಲೆ ಅಶ್ವಿನ್ ರಾವ್ ಅವರನ್ನು ಬಂಧಿಸಲು ಸಾಧ್ಯವಿಲ್ಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಸಾಕ್ಷ್ಯಾಧಾರಗಳಿರಬೇಕು, ಇಲ್ಲದೇ ಇದ್ದಾರೆ ಸಾಮಾನ್ಯ ಜನರೇ ಆಗಿರಲಿ, ವಿಐಪಿಯೇ ಆಗಿರಲಿ ಬಂಧಿಸಲಾಗದು. ಈ ಬಗ್ಗೆ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಎಡಿಜಿಪಿ ಕಮಲ್ ಪಂತ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಮಲ್ ಪಂತ್ ಅವರ ಭೇಟಿ ಬಳಿಕ ಮಾತನಾಡಿದ ಹೆಚ್.ಎಸ್ ದೊರೆಸ್ವಾಮಿ, ಪ್ರಕರಣದ ಸಂಬಂಧ ಮಾಹಿತಿ ಪಡೆದುಕೊಂಡಿದ್ದೇನೆ. ತನಿಖೆಯ ವಿಳಂಬದ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಮನವಿಗೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ದೊರೆಸ್ವಾಮಿ ತಿಳಿಸಿದ್ದಾರೆ.

ಪಿ.ಆರ್.ಒ ಕಚೇರಿಗೆ ಬೀಗ: ಪ್ರಕರಣದಲ್ಲಿ ಆರೋಪ ಕೇಳಿಬಂದಿರುವ ಲೋಕಾಯುಕ್ತ ಜಂಟಿ ಆಯುಕ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯ್ಯದ್ ರಿಯಾಜ್ ಅವರ ಕಚೇರಿಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇನ್ನು ರಜೆ ವಿಸ್ತರಿಸದೆ ಇದ್ದರೂ ರಿಯಾಜ್ ಅವರು ಕರ್ತವ್ಯಕ್ಕೆ ಹಾಜರಾಗದೆ ಇರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ಅಧಿಕಾರಿಗಳು ಚಿಂತನೆ  ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com