
ಬೆಂಗಳೂರು: ನಾಗ್ಪುರದಲ್ಲಿ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ (South Central Zone Cultural Centre-SCZCC) ಆಯೋಜಿಸಿದ್ದ 28ನೇ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ಬೆಂಗಳೂರಿನ ಕಲಾವಿದ ರವಿ ಕುಮಾರ್ ಕಾಶಿ ಅವರು ಕಲಾಕೃತಿಯೊಂದನ್ನು ಕಳುಹಿಸಿಕೊಟ್ಟಿದ್ದರು. 'ಆಜ್ ಕಾ ರಾವಣ್' ಎಂಬ ಥೀಮ್ ಹೊಂದಿರುವ ಪೇಪರ್ನಲ್ಲಿ ಮಾಡಿದ ಕಲಾಕೃತಿಯಾಗಿತ್ತು ಅದು. ಆದರೆ ಪ್ರದರ್ಶನ ಮುಗಿದ ನಂತರ ಕಲಾವಿದರಿಗೆ ತಮ್ಮ ಕಲಾಕೃತಿಯನ್ನು ವಾಪಸ್ ಮಾಡಿದ ರೀತಿ ಅಚ್ಚರಿ ಹುಟ್ಟಿಸಿದೆ. ಕಲಾಕೃತಿಯನ್ನು ಒಂದು ಬಾಕ್ಸ್ನಲ್ಲಿ ಹಾಗೆ ತುರುಕಿ ಕಳಿಸಲಾಗಿದೆ. ಆ ಕಲಾಕೃತಿಯನ್ನು ಸರಿ ಮಾಡಲು ಕೂಡಾ ಸಾಧ್ಯವಾಗದ ರೀತಿಯಲ್ಲಿದು ಹಾಳಾಗಿಬಿಟ್ಟಿದೆ.
ಪ್ರದರ್ಶನಕ್ಕಾಗಿ ಕಲಾವಿದರು ಕಲಾಕೃತಿಗಳನ್ನು ಕಳುಹಿಸಿಕೊಡುವಾಗ ಬಬಲ್ ಶೀಟ್ ಇಟ್ಟು, ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಯಾವುದೇ ಹಾನಿಯಾಗದಂತೆ ಕಳುಹಿಸಿಕೊಟ್ಟರೆ, ಅದನ್ನು ವಾಪಸ್ ಕೊಡುವಾಗ ಈ ರೀತಿ ಮಾಡಿದ್ದಾರೆ ಎಂದು ಕಲಾವಿದ ಕಾಶಿ ಅವರು ಫೇಸ್ಬುಕ್ನಲ್ಲಿ ತಮಗಾಗಿರುವ ಅನುಭವದ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಕಾಶಿ ಅವರಲ್ಲಿ ಮಾತನಾಡಿದಾಗ ಅವರು ಹೇಳಿದ್ದು :
ಈ ಬಗ್ಗೆ ಸಂಬಂಧಪಟ್ಟವರಿಗೆ ಇಮೇಲ್ ಮಾಡಿದ್ದೇನೆ. ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದಾಗ, ಇಲ್ಲಿ ಖಾಸಗಿ ಕೊರಿಯರ್ ವ್ಯವಸ್ಥೆಯೇನೂ ಇಲ್ಲ. ರೈಲಿನಲ್ಲಿ ಕಳುಹಿಸಿಕೊಡ್ತೀವಿ ಎಂದು ಹೇಳಿದ್ದರು. ಹಾಗೆ ರೈಲಿನಲ್ಲಿ ಬಂದ ಪಾರ್ಸೆಲ್ ನ್ನು ಕಲೆಕ್ಟ್ ಮಾಡಲು ಎರಡು ಮೂರು ಬಾರಿ ರೈಲ್ವೇ ಸ್ಟೇಷನ್ಗೆ ಹೋಗಿ ಕಲೆಕ್ಟ್ ಮಾಡಿದ್ದೂ ಆಯ್ತು. ಜುಲೈ 1 ನೇ ತಾರೀಖಿಗೆ ಕಳುಹಿಸಿಕೊಟ್ಟ ಪಾರ್ಸೆಲ್ ಜುಲೈ 20ನೇ ತಾರೀಖಿಗೆ ನನ್ನ ಕೈಸೇರಿದೆ. ಪಾರ್ಸೆಲ್ ತೆರೆದಾಗ ನನ್ನ ಕಲಾಕೃತಿಯನ್ನು ಕಾಗದದ ಉಂಡೆಯಂತೆ ಬಾಕ್ಸ್ನಲ್ಲಿ ತುರುಕಿ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ಯಾರನ್ನು ದೂರಬೇಕು? ಕಲಾಕೃತಿಯನ್ನು ನಾವು ಕಳುಹಿಸಿಕೊಡುವಾಗ ರು. 1000 ಶುಲ್ಕವನ್ನೂ ಪಾವತಿಸಿದ್ದೆವು. ಆದರೆ ಸರ್ಕಾರಿ ಸಂಸ್ಥೆಯಾದ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ ಕಲಾವಿದನ ಕಲಾಕೃತಿಯೊಂದನ್ನು ಇಷ್ಟೊಂದು ಬೇಜವಾಬ್ದಾರಿಯಿಂದ ಕಳುಹಿಸಿಕೊಟ್ಟಿರುವುದಕ್ಕೆ ಏನೆನ್ನಬೇಕು? ಕಲೆ ಮತ್ತು ಕಲಾವಿದನಿಗೆ ಕೊಡುವ ಗೌರವ ಇದೇನಾ? ಕಾಶಿಯವರ ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ.
Advertisement