ಕಾರ್ಗಿಲ್ ಯೋಧರಿಗೆ ನುಡಿನಮನ

ದೇಶಕ್ಕಾಗಿ ಹುತಾತ್ಮರಾದ ಧೀರ ಯೋಧರ ಹೆಮ್ಮೆಯ ಸ್ಮರಣೆ ಹಾಗೂ ಅವರ ಕುಟುಂಬದ ನೋವಿನ ಭಾವದ ನಡುವೆ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಭಾನುವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಿ, ಸೈನಿಕರಿಗೆ...
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್ ನಲ್ಲಿ ನಮನ ಸಲ್ಲಿಸುತ್ತಿರುವ ಯೋಧರು
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್ ನಲ್ಲಿ ನಮನ ಸಲ್ಲಿಸುತ್ತಿರುವ ಯೋಧರು
Updated on

ಬೆಂಗಳೂರು: ದೇಶಕ್ಕಾಗಿ ಹುತಾತ್ಮರಾದ ಧೀರ ಯೋಧರ ಹೆಮ್ಮೆಯ ಸ್ಮರಣೆ ಹಾಗೂ ಅವರ ಕುಟುಂಬದ ನೋವಿನ ಭಾವದ ನಡುವೆ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಭಾನುವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಿ, ಸೈನಿಕರಿಗೆ ಗೌರವ ಅರ್ಪಿಸಲಾಯಿತು.

ಈ ಯೋಧರು ನಮ್ಮ ಪಾಲಿಗೆ ಇಲ್ಲದಿದ್ದರೆ ಹೇಗೆ ಎಂಬ ಪ್ರಶ್ನೆ ನಡುವೆಯೇ ಅಲ್ಲಿ ನೆರೆದ ನೂರಾರು ಜನರು ಹಾಗೂ ಗಣ್ಯರು ಧೀರ ಯೋಧರ ಆತ್ಮಗಳಿಗೆ ಭಕ್ತಿ ಭಾವದಿಂದ ವಂದಿಸಿದರು. ಅವರಿಂದಲೇ ನಾವು ನೆಮ್ಮದಿ ಹಾಗೂ ಶಾಂತಿಯಿಂದ ಬದುಕಿದ್ದೇವೆ ಎಂಬ ತಜ್ಞತಾ ಭಾವ. ಮತ್ತೆಂದೂ ಯುದಟಛಿ ಕಾಡದಿರಲಿ, ಯಾವ ಕುಟುಂಬಗಳ ಜ್ಯೋತಿ ಆರದಿರಲಿ ಎಂಬ ಪ್ರಾರ್ಥನೆಯೊಂದಿಗೆ ವಿಜಯ ದಿವಸವನ್ನು ನೆನಪು ಮಾಡಿಕೊಂಡರು ಎಲ್ಲರೂ.

ಭಾನುವಾರ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್‍ಮೆಂಟ್ ಟ್ರಸ್ಟ್ ಏರ್ಪಡಿಸಿದ್ದ 16ನೇ ವರ್ಷದ ಕಾರ್ಗಿಲ್ ವಿಜಯ ದಿನದಂದು ಸರ್ಕಾರದ ಪರವಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ಸೈನಿಕರಿಗಾಗಿ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿರುವ ಯೋಧರನ್ನು ನೆನೆದು ರಾಷ್ಟ್ರದೆಲ್ಲೆಡೆ ನಮನ ಅರ್ಪಿಸಲಾಗುತ್ತಿದೆ. ಯೋಧರ ಕುಟುಂಬದವರಿಗೆ ಅವರ ಅಗಲಿಕೆಯನ್ನು ಭರಿಸುವ ಸ್ಥೈರ್ಯ ಬರಲಿ ಎಂದರು. ನಿವೃತ್ತ ಯೋಧರು `ಸಮಾನ ಹುದ್ದೆ ಸಮಾನ ಪಿಂಚಣಿ'ಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಅವರ ಬೇಡಿಕೆಗಳನ್ನು ಈಡೇರಿಸುವ ಕುರಿತು ಕೇಂದ್ರಕ್ಕೂ ಪತ್ರ ಬರೆಯಲಾಗುವುದು.

ಕೇಂದ್ರ ಸರ್ಕಾರ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದೆ ಎಂದು ಆಶಿಸುತ್ತೇನೆ ಎಂದರು. ಸದಾ ಯೋಧರ ಹಿತ್ತಾಸಕ್ತಿಯನ್ನು ಚಿಂತಿಸುವ ಅವರಿಗಾಗಿ ದನಿ ಎತ್ತುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್,ಪ್ರತಿವರ್ಷದಂತೆ ಈ ವರ್ಷವೂ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಗುಚ್ಛ ಅರ್ಪಿಸಿ ಭಾವಪೂರ್ವಕ ನಮನ ಸಲ್ಲಿಸಿದರು. ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಎಸ್.ಕೆ. ಪಟ್ನಾಯಕ್, ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ, ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ವಿ. ಗಗನ್‍ದೀಪ್, ಎಎಸ್‍ಸಿ ಕಾಲೇಜು ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಕಟೇವಾ, ವೀರ ಮರಣ ಹೊಂದಿದ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ಪೋಷಕರು ಸೈನಿಕರಿಗಾಗಿ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು.

ಸೈನಿಕರ ಕುಟುಂಬದವರು, ಸೈನಿಕರು, ಎನ್‍ಸಿಸಿ, ಸ್ಕೌಟ್, ಆರ್ಮಿ ಪಬ್ಲಿಕ್ ಶಾಲೆ ಮಕ್ಕಳು, ನಿವೃತ್ತ ಸೇನಾ ಅಧಿಕಾರಿಗಳು ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ  ಸಂದರ್ಭದಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಬ್ಯಾಂಡ್‍ಸೆಟ್ ನುಡಿಸಿದ ಸೈನಿಕ ಸಂಗೀತ ಗಮನ ಸೆಳೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com