ಕುಟುಂಬದ ಬಗ್ಗೆಯೂ ಯೋಚಿಸಿ: ರೈತರಿಗೆ ಆದಿಚುಂಚನಗಿರಿ ಸ್ವಾಮೀಜಿ ಕಿವಿಮಾತು

ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು...
ಶ್ರೀ ನಿರ್ಮಲಾನಂದ ಸ್ವಾಮೀಜಿ(ಸಂಗ್ರಹ ಚಿತ್ರ)
ಶ್ರೀ ನಿರ್ಮಲಾನಂದ ಸ್ವಾಮೀಜಿ(ಸಂಗ್ರಹ ಚಿತ್ರ)

ಮದ್ದೂರು: ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ನಿಮ್ಮ ನೆರವಿಗೆ ದಿಚುಂಚನಗಿರಿ ಮಠ ಸದಾ ಇರುತ್ತದೆ ಎಂದು ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮಿ ಅಭಯ ನೀಡಿದರು.

ತಾಲೂಕಿನ ಮಾದಪ್ಪನಕೊಪ್ಪಲು, ಕೋಣ ಸಾಲೆ, ವಳಗೆರೆಹಳ್ಳಿ, ಸಾದೊಳಲು, ಕುದರ ಗುಂಡಿ, ಅರೆಚಾಕನಹಳ್ಳಿ, ಬಿದರಹೊಸಹಳ್ಳಿ ಹಾಗೂ ಎಸ್ .ಐ.ಹಾಗಲಹಳ್ಳಿ ಗ್ರಾಮಗಳಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಸೋಮವಾರ ಶಾಖಾ ಮಠದ ಸ್ವಾಮೀಜಿಗಳೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಶ್ರೀಗಳು ಮಾತನಾಡಿದರು.

ರೈತರ ಆತ್ಮಹತ್ಯೆಗೆ ಕೌಟುಂಬಿಕ, ಮಾನಸಿಕ,ಆರ್ಥಿಕ, ಬೆಳೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇದರಿಂದ ನೊಂದ ರೈತರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುವುದಕ್ಕೂ ಮುನ್ನಾ ತಮ್ಮನ್ನು ನಂಬಿದ ಕುಟುಂಬ, ಮಕ್ಕಳು, ಬಳಗ ಮತ್ತು ಸಮಾಜವನ್ನು ಮರೆಯಬಾರದು. ಕೃಷಿಕರಿಗೆ ಹಲವು ಸಮಸ್ಯೆಗಳಿವೆ. ಇದಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸಮಸ್ಯೆಗಳ ಪರಿಹಾರಕ್ಕೆ ಆದಿಚುಂಚನಗಿರಿ ಮಠ ಸದಾ ಸಿದ್ಧವಿದೆ ಎಂದು ಶ್ರೀಗಳು ಕಿವಿಮಾತು ಹೇಳಿದರು.

ದೇಶದ ಅನ್ನದಾತರಾದ ರೈತರು ನಾನಾ ಕಾರಣಗಳಿಂದಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ದುಃಖಕರವಾದ ಸಂಗತಿ. ಇಂತಹ ಸಂಕಷ್ಟ ಪರಿಸ್ಥಿತಿಯಿಂದ ರೈತರನ್ನು ಪಾರು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸದಿರುವುದು ಅವರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ನಿರ್ಮಲಾ ನಂದನಾಥಸ್ವಾಮಿ ನೊಂದು ನುಡಿದರು. ಮಾದಪ್ಪನ ಕೊಪ್ಪಲು ಗ್ರಾಮದಲ್ಲಿ ಸಾಲದಭಾದೆಯಿಂದ ಆತ್ಮಹತ್ಯೆಗೆ ಶರಣಾದ ರೈತ ನಂಜುಂಡಯ್ಯನ ಪುತ್ರ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಈತನಿಗೆ ಮಠದ ಶಾಖೆಗಳಿಗೆ ಸೇರಿದ ವಾಹನಗಳಲ್ಲಿ ಚಾಲಕನ ಉದ್ಯೋಗ ನೀಡುವುದಾಗಿ ನಿರ್ಮಲಾ ನಂದನಾಥ ಸ್ವಾಮೀಜಿ ಆಶ್ವಾಸನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com