ಆ.5ರವರೆಗೆ ಎಸ್‍ಐಟಿ ವಶಕ್ಕೆ ರಿಯಾಜ್‍

ಲೋಕಾಯುಕ್ತ ಕಚೇರಿ ಲಂಚ ಹಗರಣದಲ್ಲಿ ಬಂಧಿತರಾಗಿದ್ದ ಪ್ರಮುಖ ಆರೋಪಿ ಲೋಕಾಯುಕ್ತ ಪಿಆರ್‍ಒ, ಜಂಟಿ ಆಯುಕ್ತ ಸೈಯ್ಯದ್ ರಿಯಾಜ್ ಅವರನ್ನು ಆಗಸ್ಟ್ ...
ಲೋಕಾಯುಕ್ತ ಪಿಆರ್ ಒ ಸೈಯ್ಯದ್ ರಿಯಾಜ್
ಲೋಕಾಯುಕ್ತ ಪಿಆರ್ ಒ ಸೈಯ್ಯದ್ ರಿಯಾಜ್

ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಹಗರಣದಲ್ಲಿ ಬಂಧಿತರಾಗಿದ್ದ ಪ್ರಮುಖ ಆರೋಪಿ ಲೋಕಾಯುಕ್ತ ಪಿಆರ್‍ಒ, ಜಂಟಿ ಆಯುಕ್ತ ಸೈಯ್ಯದ್ ರಿಯಾಜ್ ಅವರನ್ನು ಆಗಸ್ಟ್ 5ರವರೆಗೆ ವಿಶೇಷ ತನಿಖಾ ತಂಡದ ವಶಕ್ಕೆ ಒಪ್ಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಆರೋಪಿ ರಿಯಾಜ್ ಕೋರಮಂಗಲದಲ್ಲಿರುವ ಆಕ್ಯುರಾ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಎಸ್ ಐಟಿ ಅಧಿಕಾರಿಗಳು ಭಾನುವಾರ ಮಧ್ಯಾಹ್ನ 3 ಗಂಟೆಗೆ ಬಂಧಿಸಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್‍ಐಟಿ ಮುಖ್ಯ ತನಿಖಾಧಿಕಾರಿ ಲಾಬೂರಾಮ್ ಹಾಗೂ ತಂಡ ವಿಶೇಷ ನ್ಯಾಯಾಲಯದ ಮುಂದೆ ರಿಯಾಜ್ ಅವರನ್ನು ಹಾಜರುಪಡಿಸಿದರು.

ಈ ವೇಳೆ ಪ್ರಕರಣದ ಬಗ್ಗೆ ದಾಖಲೆ ಸಮೇತ ವಿವರಣೆ ನೀಡಿದ ಸರ್ಕಾರಿ ಅಭಿಯೋಜಕ (ಪಿ.ಪಿ) ರಮೇಶ್ ಬಾಬು, ಆರೋಪಿಯನ್ನು 12 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಮನವಿ ಪರಿಗಣಿಸಿದ ನ್ಯಾಯಾಧಿಶ ವಿ.ಜಿ. ಬೋಪಯ್ಯ ಅವರು ಆ.5ರವರೆಗೆ (10 ದಿನ) ಎಸ್‍ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಇದಕ್ಕೂ ಮೊದಲು ನ್ಯಾಯಾಲಯದಲ್ಲಿ ರಿಯಾಜ್ ಪರ ವಕೀಲ ಹಸ್ಮತ್ ಪಾಷಾ, ಸರ್ಕಾರಿ ವಕೀಲ ರಮೇಶ್ ವಾದ- ಪ್ರತಿವಾದ ಮಂಡಿಸಿದರೆ, ರಿಯಾಜ್ ಕೂಡ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟು, ಗೋಗರೆದರು.
ಅಲ್ಲದೆ ಇದೆಲ್ಲಾ  ಮಾಧ್ಯಮಗಳ ವೈಭವೀಕರಣ ಎಂದು ಆರೋಪಿಸಿದರು. ಪ್ರಕರಣ ದಾಖಲಾಗಿ 25 ದಿನಗಳ ನಂತರ ರಿಯಾಜ್ ಅವರನ್ನು ಬಂಧಿಸಲಾಗಿದೆ. ಅವರು ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಬಿಪಿ, ಶುಗರ್ ಸೇರಿದಂತೆ ಗಂಭೀರ ಕಾಯಿಲೆಗಳಿವೆ. ಅವರ ಪ್ರಾಣಕ್ಕೆ ತೊಂದರೆ ಆಗದಿರಲು ಚಿಕಿತ್ಸೆ ಅಗತ್ಯ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕು. ತನಿಖಾಧಿಕಾರಿಗಳಿಗೆ ಎಲ್ಲ ರೀತಿಯಿಂದಲೂ ಸಹಕರಿಸುತ್ತಾರೆ ಎಂದು ರಿಯಾಜ್ ಪರ ವಕೀಲ ಹಸ್ಮತ್ ಪಾಷಾ ಮನವಿ ಮಾಡಿದರು. ಅಲ್ಲದೇ, ಕಾಯಿಲೆ ಪೀಡಿತ ರಿಯಾಜ್ ಅವರನ್ನು ಪೊಲೀಸರು ಬಲವಂತವಾಗಿ ಕರೆತಂದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವೇ ಇಲ್ಲ. ಹೀಗಾಗಿ, ಮಧ್ಯಂತರ ಜಾಮೀನು ನೀಡಿದರೆ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ರಮೇಶ್, ಅಕ್ಯುರಾ ಆಸ್ಪತ್ರೆ ವೈದ್ಯರೊಂದಿಗೆ ಚರ್ಚೆ ನಡೆಸಿ, ರಿಯಾಜ್ ಅವರಾಗಿಯೇ ಡಿಸ್ಚಾರ್ಜ್ ಆದ ಬಳಿಕ ಅವರನ್ನು ಬಂಧಿಸಲಾಯಿತು. ಅಲ್ಲಿನ ವೈದ್ಯರೊಂದಿಗೆ ಮಾತನಾಡಿದಾಗ ಯಾವುದೇ ತೊಂದರೆ ಇಲ್ಲ ಎಂದರು. ನಂತರ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಅವರ ಜೀವಕ್ಕೆ ಅಪಾಯ ಉಂಟಾಗುವ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯವಾಗಿದ್ದಾರೆ ಎಂದು ವರದಿ ಹೇಳುತ್ತದೆ. ಬಂಧನದಿಂದ ತಪ್ಪಿಸಿಕೊಳ್ಳಲು ಇವರು ಅನಾರೋಗ್ಯದ ನೆವ ಹೇಳುತ್ತಿದ್ದಾರೆ ಎಂದರು.

ಈ ವೇಳೆ ಪ್ರತಿವಾದ ಮಾಡಿದ ಹಸ್ಮತ್ ಪಾಷಾ, ಇವರ ವಿರುದ್ಧ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಅದರಲ್ಲಿ  ಅವರ ಹೆಸರೂ ನಮೂದಿಸಿಲ್ಲ. ಅಷ್ಟಕ್ಕೂ ಆರೋಪ ಮಾಡಲಾಗಿರುವ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆಯೇ 7 ವರ್ಷ. ಉಳಿದಂತೆ ಕಡಿಮೆ ಶಿಕ್ಷೆ ಸೆಕ್ಷನ್‍ಗಳಿವೆ. ಅಲ್ಲದೇ, ಅವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಇಲ್ಲ. ಹೀಗಾಗಿ, ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ರಮೇಶ್ ಬಾಬು, ಈ ಪ್ರಕರಣದಲ್ಲಿ ಶಿಕ್ಷೆ ಮಾನದಂಡ ಅಲ್ಲವೇ ಅಲ್ಲ. ಇದೊಂದು ಗಂಭೀರ ವಿಷಯ. ದೇಶದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಲೋಕಾಯುಕ್ತ ಸಂಸ್ಥೆಯಲ್ಲಿ  ಅಕ್ರಮ ನಡೆದಿರುವುದು ರಾಷ್ಟ್ರೀಯ ಸುದ್ದಿಯಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ರಿಯಾಜ್ ಅವರು ಅಕಮರದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಗೊತ್ತಾಗಿದೆ. ದಾಖಲೆಗಳು  ಇವೆ. ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದಾರೆ. ಈ ಮಾಹಿತಿ ಕಲೆ ಹಾಕಲು ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ, ವಿಚಾರಣೆ ಎದುರಿಸಲು ಸೂಚನೆ ನೀಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಒಂದು ವೇಳೆ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಅಧಿಕಾರಿಗಳೇ ಸೂಕ್ತ ಚಿಕಿತ್ಸೆ ಕೊಡಿಸುತ್ತಾರೆ ಎಂದರು. ಆರೋಪಿಯ ವಶಕ್ಕೆ ಪಡೆದು ವಿಚಾರಣೆ ನಡೆಸಲು ವಿವಿಧ ಪ್ರಕರಣಗಳ ಉದಾಹರಣೆ ನೀಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತು. ಕಸ್ಟಡಿಗೂ ವಾದ-ಪ್ರತಿವಾದ: ಇವರಿಗೆ ಜೀವಕ್ಕೆ ಅಪಾಯ ಉಂಟು ಮಾಡುವ ಕಾಯಿಲೆ ಇಲ್ಲದಿರಬಹುದು. ಆದರೆ, ಮಾನಸಿಕ ಹಾಗೂ ಜೀವ ಹಿಂಡುವ ಕಾಯಿಲೆಗಳು ಇವೆ. ಅವರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ, ಎಸ್‍ಐಟಿ ಕಸ್ಟಡಿ ಅಗತ್ಯವಿಲ್ಲ ಎಂದು ರಿಯಾಜ್ ಪರ ವಕೀಲ ಹಸ್ಮತ್ ಪಾಷಾ ನ್ಯಾಯಾಲಯಕ್ಕೆ ತಿಳಿಸಿದರು. ರಿಯಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಮಾತ್ರವಲ್ಲದೇ, ಹಲವು ದಾಖಲೆಗಳನ್ನು ಸಂಗ್ರಹಿಸಬೇಕಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕಿದೆ. ಹೀಗಾಗಿ, 12 ದಿನ ವಶಕ್ಕೆ ನೀಡಿ ಎಂದು ಸರ್ಕಾರಿ ವಕೀಲ ರಮೇಶ್ ಮನವಿ  ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಸ್ಮತ್ ಪಾಷಾ, ಅತ್ಯಂತ ಕಡಿಮೆ ಅವಧಿ ಕಸ್ಟಡಿ ನೀಡಿ ಎಂದರು. ಅಂತಿಮವಾಗಿ ಆ.5ರ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶ ಹೊರಡಿಸಿದರು.

ಮನೆ ಊಟ, ಆದ್ಯತೆ ವೈದ್ಯರ ಸೇವೆಗೆ ಬೇಡಿಕೆ: ಇದೇ ವೇಳೆ, ರಿಯಾಜ್ ಅವರ ಮನವಿಯಂತೆ, ಎಸ್‍ಐಟಿ ಕಸ್ಟಡಿ ವೇಳೆ ಅವರಿಗೆ ಮನೆ ಊಟ ಮಾಡಲು ಅವಕಾಶ ನೀಡಬೇಕು. ಅಲ್ಲದೇ ಅವರ ಆಯ್ಕೆಯ ವೈದ್ಯರ ಬಳಿ ಪರೀಕ್ಷೆ ಹಾಗೂ ಚಿಕಿತ್ಸೆಗೆ ಅವಕಾಶ ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದರು.

ಪರಿಪರಿಯಾಗಿ ಬೇಡಿ ಕಣ್ಣೀರಿಟ್ಟ ರಿಯಾಜ್!
`ಮೈ ರೋಲ್ ಇಸ್ ಜಿರೋ ಸಾರ್. ದೇರ್ ಇಸ್ ನೋ ಅಲಿಗೇಷನ್ಸ್ ಆಗೆನಸ್ಟ್. ಐ ಆ್ಆಯ ಮ್ ರೆಡಿ ಟು ಫೇಸ್ ಟ್ರಯಲ್, ಐ ವಿಲ್ ಪ್ರೂವ್ ಮೈ ಇನೋಸೆನ್ಸ್ ಸಾರ್' (ಇದರಲ್ಲಿ ನನ್ನ ಪಾತ್ರ ಶೂನ್ಯ. ಯಾವುದೇ ಆರೋಪ ನನ್ನ ಮೇಲಿಲ್ಲ. ವಿಚಾರಣೆ ಎದುರಿಸಲು ಸಿದ್ದ. ನಾನು ಅಮಾಯಕ ಎನ್ನುವುದನ್ನು ಸಾಬೀತುಪಡಿಸುತ್ತೇನೆ) ಹೀಗೆ, ರಿಯಾಜ್ ಕಣ್ಣೀರಿಟ್ಟು ಗೊಗರೆದು ತನ್ನ ಪಾತ್ರ ಏನು ಇಲ್ಲ ಎಂದು ನ್ಯಾಯಾಧೀಶರ ಬಳಿ ಪರಿಪರಿಯಾಗಿ ಬೇಡಿಕೊಂಡರು. ನನ್ನ ಕರ್ತವ್ಯವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಮೆಚ್ಚಿ ಎಕ್ಸಲೆಂಟ್ ಎಂದು ಹೇಳಿದ್ದಾರೆ. ಅದಕ್ಕೆ ದಾಖಲೆಗಳಿವೆ. ನನ್ನ ಜೀವನದಲ್ಲಿ ಯಾವುದೇ ತಪ್ಪು ಕೆಲಸ ಮಾಡಿಲ್ಲ. ಎಲ್ಲವೂ ಕಪೋಲಕಲ್ಪಿತ. ಎಲ್ಲರೂ ಸೇರಿ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲು ಯತ್ನಿಸುತ್ತಿದ್ದಾರೆ. ಇದರಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಇಲ್ಲಸಲ್ಲದ ಸುದ್ದಿಯನ್ನು ನನ್ನೊಂದಿಗೆ ತಳುಕು ಹಾಕಿ, ಫೋಟೋ ಹಾಕಿ ಬರೆಯುತ್ತಿದ್ದಾರೆ. ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಅವಲತ್ತುಕೊಂಡರು.

ಮಾಧ್ಯಮಗಳು ನನ್ನ ಫೋಟೋ, ವಿಡಿಯೋ ತೆಗೆಯಬಾರದು
ಮಾಧ್ಯಮಗಳು ಅನಗತ್ಯವಾಗಿ ನನ್ನ ಫೋಟೋ, ವಿಡಿಯೋ ತೆಗೆದು ನನ್ನನ್ನು ಅವಮಾನ ಮಾಡುತ್ತಿವೆ. ಆರೋಪಕ್ಕಿಂತಲೂ ಮಾಧ್ಯಮಗಳೇ ನನ್ನನ್ನು ಅಪರಾಧಿ ಎಂದು ಬಿಂಬಿಸಿ ಸಮಾಜದಲ್ಲಿ ನನ್ನ ಘನತೆಗೆ ಧಕ್ಕೆ ತರುತ್ತಿವೆ. ಈ ರೀತಿ ಮಾಡಿ ತೊಂದರೆ ನೀಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಿ ಎಂದು ಎಂದು ಸೈಯ್ಯದ್ ರಿಯಾಜ್ ಅವರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಮನವಿ ಆಲಿಸಿದ ಅವರು, ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತನಿಖಾಧಿಕಾರಿ ಲಾಬೂ ರಾಮ್ ಅವರಿಗೆ ನ್ಯಾಯಾಧೀಶರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲಾಬೂರಾಮ್ , ಮಾಧ್ಯಮ ಪ್ರತಿನಿಧಿಗಳು, ಕ್ಯಾಮೆರಾಗಳು ಭಾರಿ ಸಂಖ್ಯೆ ಯಲ್ಲಿರುತ್ತವೆ. ಅವರನ್ನು ತಡೆಯಲು ಆಗುವುದಿಲ್ಲ. ಅವರ ಕೆಲಸ ಮಾಡುತ್ತಾರೆ. ಆದರೆ, ತೀರಾ ಹತ್ತಿರ ಬಂದು ಫೋಟೋ ವಿಡಿಯೋ ತೆಗೆಯದಂತೆ ಹೇಳುತ್ತೇವೆ. ಅಲ್ಲದೇ ನಿಮ್ಮ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬಹುದು ಎಂದರು. ಆದರೆ, ಇದಕ್ಕೊಪ್ಪದ ರಿಯಾಜ್, ನಾನು ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಏನು ಬೇಕಾದರೂ ಮಾಡಿ ಎಂದು ತನಿಖಾಧಿಕಾರಿ ಕಡೆ ಮುಖ ಮಾಡಿ ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆ ಚೆನ್ನಾಗಿಲ್ಲ!
ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ನನಗಿರುವ ಆರೋಗ್ಯ ಸಮಸ್ಯೆಗೆ ತಜ್ಞ ವೈದ್ಯರ ಬಳಿ ಚಿಕಿತ್ಸೆ ಬೇಕಾಗುತ್ತದೆ. ಬಂಧಿಸಿ ವಶಕ್ಕೆ ಪಡೆದ ಪೊಲೀಸರು ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಬದಲು ಯಾರೋ ಸ್ತಾತಕೋತ್ತರ ವಿದ್ಯಾರ್ಥಿ ಆರೋಗ್ಯ ತಪಾಸಣೆ ನಡೆಸಿದ. ಆತ ಕೂಡ ಕೆಟ್ಟದಾಗಿ  ವರ್ತಿಸಿದ.  ಬಿಪಿ ಪರಿಶೀಲನೆ ನಡೆಸಿದಂತೆ ಮಾಡಿ ಚೆನ್ನಾಗಿದ್ದೀರಲ್ಲಾ ಎಂದು ಹೇಳಿದ. ಮೊದಲೇ ವಿಕ್ಟೋರಿಯಾ ಆಸ್ಪತ್ರೆ ಚೆನ್ನಾಗಿಲ್ಲ, ನಿಮಗೆಲ್ಲಾ ಗೊತ್ತಿದೆ ಎಂದು ರಿಯಾಜ್ ನ್ಯಾಯಾಧೀಶರ ಬಳಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com