
ಬೆಂಗಳೂರು: ಉಪಲೋಕಾಯುಕ್ತರ ಸ್ಥಾನಕ್ಕೆ ವಿವಾದಾತ್ಮಕ ವ್ಯಕ್ತಿಗಳನ್ನು ನೇಮಿಸಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಗ ಸಂಸ್ಥೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಜನ ಆ ಸಂಸ್ಥೆ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ನ್ಯಾ. ಕೆ.ಎಲ್. ಮಂಜುನಾಥ್ ಅಂತಹ ವಿವಾದಾತ್ಮಕ ವ್ಯಕ್ತಿಗಳನ್ನು ಆ ಸ್ಥಾನಕ್ಕೆ ನೇಮಿಸುವುದು ಸರಿಯಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮಂಜುನಾಥ್ ಅವರ ವಿರುದ್ಧ ಹೇಳಿಕೆ ನೀಡುವುದು ಬರೀ ಆರೋಪ ಮಾಡಿದಂತಾಗುತ್ತದೆ. ಹಾಗಾಗಿ ಅವರ ಮೇಲಿನ ವಿವಾದಾತ್ಮಕ ವಿಷಯ ಕುರಿತು ಜು.28 (ಮಂಗಳವಾರ)ಹುಬ್ಬಳ್ಳಿಯಲ್ಲಿ ದಾಖಲೆ ಸಹಿತ ಸತ್ಯಾಂಶ ಬಹಿರಂಗಪಡಿಸುತ್ತೇನೆ ಎಂದರು. ಲೋಕಾಯುಕ್ತ ಸಂಸ್ಥೆಯಲ್ಲಿನ ಸಿಸಿಟಿವಿಯ ಸಾಕ್ಷ್ಯ ಸೇರಿ ಹಲವು ದಾಖಲೆ ನಾಪತ್ತೆಯಾಗಿದ್ದು, ಇದು ತನಿಖಾ ತಂಡದ ಮೇಲೆ ಸಂದೇಹ ಮೂಡಿಸುತ್ತಿದೆ. ಅಲ್ಲಿನ ಸಿಬ್ಬಂದಿ ಮೇಲಿನ ಅನುಮಾನ ಮತ್ತಷ್ಟು ಹೆಚ್ಚಲಿದ್ದು, ಸಂಸ್ಥೆಯಲ್ಲಿ ಇದುವರೆಗೂ ನಡೆದಿರುವ ಭ್ರಷ್ಟಾಚಾರ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
Advertisement