ಕರ್ನಾಟಕ ಹೈಕೋರ್ಟ್(ಸಂಗ್ರಹ ಚಿತ್ರ)
ಕರ್ನಾಟಕ ಹೈಕೋರ್ಟ್(ಸಂಗ್ರಹ ಚಿತ್ರ)

ಅಮಾನತ್ ಬ್ಯಾಂಕ್ ಠೇವಣಿದಾರರಿಗೆ ಹೈಕೋರ್ಟ್ ಸೂಚನೆ

ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಪುನರುಜ್ಜೀವನಕ್ಕಾಗಿ ಠೇವಣಿದಾರರ ಶೇ.20ರಷ್ಟು ಠೇವಣಿಯನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ನಿರ್ಣಯ ಕೈಗೊಂಡು, ಅನುಮೋದನೆಗಾಗಿ ಆರ್‍ಬಿಐಗೆ ಮನವಿ ಪತ್ರ ಸಲ್ಲಿಸುವಂತೆ ಠೇವಣಿದಾರರ ಸಂಘಕ್ಕೆ ಹೈಕೋರ್ಟ್ ಗುರುವಾರ...

ಬೆಂಗಳೂರು: ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಪುನರುಜ್ಜೀವನಕ್ಕಾಗಿ ಠೇವಣಿದಾರರ ಶೇ.20ರಷ್ಟು ಠೇವಣಿಯನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ನಿರ್ಣಯ ಕೈಗೊಂಡು, ಅನುಮೋದನೆಗಾಗಿ ಆರ್‍ಬಿಐಗೆ ಮನವಿ ಪತ್ರ ಸಲ್ಲಿಸುವಂತೆ ಠೇವಣಿದಾರರ ಸಂಘಕ್ಕೆ ಹೈಕೋರ್ಟ್ ಗುರುವಾರ ಸೂಚಿಸಿದೆ.

ನಷ್ಟದ ಸುಳಿಯಲ್ಲಿ ಸಿಲುಕಿರುವ ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುವುದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಸೇರಿ ಹಲವರು ಅರ್ಜಿ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ, ಈ ಕುರಿತು ಬ್ಯಾಂಕ್‍ನ ಪುನಶ್ಚೇತನಗೊಳಿಸಲು ಆರ್‍ಬಿಐಗೆ ಮನವಿ ಸಲ್ಲಿಸಿ ಎಂದಿತಲ್ಲದೇ, ಠೇವಣಿದಾರರು ನೀಡುವ ಮನವಿಯನ್ನು ಆರ್‍ಬಿಐ ಪರಿಗಣಿಸಬೇಕು ಎಂದು ಸೂಚಿಸಿದೆ.

ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಪುನಶ್ಚೇತನಕ್ಕೆ ಠೇವಣಿದಾರರು ಬ್ಯಾಂಕಿನಲ್ಲಿಟ್ಟ ತಮ್ಮ ಠೇವಣಿಯ ಪೈಕಿ ಶೇ.15ರಷ್ಟು ಹಣವನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ಜುಲೈ 27ರಂದು ನಡೆಸಿದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿ ಆ ಕುರಿತು ತನಗೆ ಪ್ರಸ್ತಾವನೆ ಸಲ್ಲಿಸಿದೆ. ಶೇ.20ರಷ್ಟು ಠೇವಣಿಯ ಪರಿವರ್ತನೆಯಿಂದ ರು.56 ಕೋಟಿ ಷೇರು ಬಂಡವಾಳ ಸಿಗಲಿದೆ.

ಇನ್ನು 2013ರ ಜೂನ್ 30ರಿಂದ ಇಲ್ಲಿಯವರೆಗೆ ಒಟ್ಟು ರು.168.15 ಕೋಟಿ ಸಾಲ ವಸೂಲು ಮಾಡಲಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಗುರುವಾರ ಹೈಕೋರ್ಟ್‍ಗೆ ಜ್ಞಾಪನಾ ಪತ್ರ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಶೇ.20ರಷ್ಟು ಠೇವಣಿಯನ್ನು ಬಂಡವಾಳವಾಗಿ ಪರಿವರ್ತಿಸಿದ ನಂತರ ಬ್ಯಾಂಕ್ ಪುನಶ್ಚೇತನಕ್ಕೆ ಅಗತ್ಯವಿರುವ ಉಳಿದ ಹಣವನ್ನು ತಮ್ಮ ಕಕ್ಷಿದಾರರು ಭರಿಸಲಿದ್ದಾರೆ ಎಂದು ಕೋರ್ಟ್‍ಗೆ ಭರವಸೆ ನೀಡಿದರು. ಈ ಹೇಳಿಕೆ ಪರಿಗಣಿಸಿದ ನ್ಯಾಯಪೀಠ, ಬಾಕಿ ಉಳಿದಿರುವ ಸಾಲ ವಸೂಲಾತಿ ಕಾರ್ಯ ಚುರುಕುಗೊಳಿಸುವಂತೆ ಬ್ಯಾಂಕ್ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

Related Stories

No stories found.

Advertisement

X
Kannada Prabha
www.kannadaprabha.com