60 ವರ್ಷ ಬಳಿಕ ಕಾವೇರಿ ಅತಿಥಿಗೃಹಕ್ಕೆ ಕಾಯಕಲ್ಪ

60 ವರ್ಷಗಳ ಇತಿಹಾಸ ಹೊಂದಿರುವ `ಕಾವೇರಿ' ಮುಖ್ಯವಾಗಿ ಸರ್ಕಾರಿ ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳಿಗೆ ಮೀಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

 ಬೆಂಗಳೂರು: ಅರಮನೆ ರಸ್ತೆಯಲ್ಲಿರುವ `ಕಾವೇರಿ ಅತಿಥಿಗೃಹ' ಕ್ಕೆ ಆಧುನೀಕರಣ ಭಾಗ್ಯ ದೊರೆತಿದ್ದು,3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.60 ವರ್ಷಗಳ ಇತಿಹಾಸ ಹೊಂದಿರುವ `ಕಾವೇರಿ'ಮುಖ್ಯವಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮೀಸಲಾಗಿದೆ.ಪ್ರಮುಖ ಸರ್ಕಾರಿ ಕಚೇರಿಗಳಿಗೆ ಸಮೀಪ ದಲ್ಲಿರುವ ಕಟ್ಟಡ ಹಾಗೂ ನಗರದ ಅತಿ ಹಳೆಯ ಕಟ್ಟಡ ಎಂಬ ಹೆಸರು ಕಾವೇರಿ ಅತಿಥಿಗೃಹಕ್ಕಿದೆ.

ಕಟ್ಟಡ ಹಳೆಯದಾಗಿ ಆಕರ್ಷಣೆ ಕಳೆದುಕೊಂಡಿದ್ದರೂ, ಲೋಕೋಪಯೋಗಿ ಇಲಾಖೆ ಇದುವರೆಗೆ ಕಟ್ಟಡದ ನವೀಕರಣಕ್ಕೆ ಮುಂದಾಗಿರಲಿಲ್ಲ. ಇಲಾಖೆಯಿಂದ ಪದೇ ಪದೇ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತೇ ಹೊರತು, ಪೂರ್ಣವಾಗಿ ನವೀಕರಿಸುವ ಯೋಜನೆ ರೂಪಿಸಿರಲಿಲ್ಲ. ಲೋಕೋಪಯೋಗಿ ಇಲಾಖೆ ಇದೇ ಮೊದಲ ಬಾರಿಗೆ ಕಟ್ಟಡ ಆಧುನೀಕರಣ ಕೆಲಸ ಕೈಗೆತ್ತಿಕೊಂಡಿದೆ.

ಶಾಸಕರು, ಸಂಸದರು ಅದರಲ್ಲೂ ವಿಶೇಷವಾಗಿ ಮಾಜಿಗಳು ಅತಿಥಿಗೃಹದ ಉಪಯೋಗ ಪಡೆಯುತ್ತಿದ್ದರೂ, ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ರಾಜ್ಯದ ಹಲವು ಭಾಗಗಳಿಂದ ಕರ್ತವ್ಯದ ಮೇರೆಗೆ ಬರುವ ಅಧಿಕಾರಿಗಳಿಗೆ ದಿನಕ್ಕೆ ಕೇವಲ 120 ರೂಪಾಯಿ ವಿಧಿಸಲಾಗುತ್ತದೆ. ವಿಧಾನಸೌಧ ಸೇರಿದಂತೆ ಸರ್ಕಾರಿ ಇಲಾಖೆಗಳ ಕಟ್ಟಡಗಳು ಸಮೀಪದಲ್ಲಿರುವುದರಿಂದ ಅಧಿಕಾರಿಗಳಿಗೆ ಸೂಕ್ತವಾದ ಅತಿಥಿಗೃಹವಾಗಿದೆ.

ಆಧುನೀಕರಣ:
ಆಧುನೀಕರಣ ಕಾಮಗಾರಿ ಆರಂಭವಾಗಿ 5 ತಿಂಗಳು ಕಳೆದಿದ್ದು, ಮುಂದಿನ 3-4 ತಿಂಗಳಲ್ಲಿ ಮತ್ತೆ ಬಳಕೆಗೆ ಮುಕ್ತವಾಗಲಿದೆ. ಅಂದಾಜು 4.95 ಕೋಟಿ ಮೊತ್ತದಲ್ಲಿ ಇಲಾಖೆ ಕಾಮಗಾರಿ ನಡೆಸುತ್ತಿದೆ. ಎರಡು ಮಹಡಿ ಹಾಗೂ ನೆಲಮಹಡಿಯ ಕಾರಿಡಾರ್‍ನಲ್ಲಿ 15 ವರ್ಷಗಳ ಹಿಂದೆ ಅಳವಡಿಸಿದ ಸಿರಾಮಿಕ್ ಟೈಲ್ಸ್ ತೆಗೆದು, ಗ್ರಾನೈಟ್ ಅಳವಡಿಸಲಾಗುತ್ತಿದೆ. ನೆಲಮಹಡಿ ಹಾಗೂ ಎರಡನೇ ಮಹಡಿಯ ಕೊಠಡಿಗಳಿಗೆ ಗ್ರಾನೈಟ್ ನೆಲಹಾಸು ಅಳವಡಿಸಿದ್ದು, ಈಗ ಮೊದಲ ಮಹಡಿಯ ಕೊಠಡಿಗೂ ಗ್ರಾನೈಟ್ ಅಳವಡಿಸಲಾಗುತ್ತಿದೆ. ಮೆಟ್ಟಿಲಿಗೂ ಗ್ರಾನೈಟ್ ಭಾಗ್ಯ ದೊರೆಯಲಿದೆ.

ಕಟ್ಟಡದ ಹೊರಭಾಗಕ್ಕೆ ಸೀಲಿಂಗ್ ಹಾಗೂ ಪ್ಲಾಸ್ಟರಿಂಗ್ ಮಾಡಲಾಗುತ್ತಿದೆ. ನೀರಿನ
ಕೊಳವೆಗಳು ಹಳೆಯದಾಗಿದ್ದು, ತುಕ್ಕು ಹಿಡಿಯದೆ ಹಲವು ವರ್ಷ ಕಾಲ ಬಾಳುವ `ಸಿಪಿವಿಸಿ ಪೈಪ್' ಅಳವಡಿಸಲಾಗುತ್ತಿದೆ.  ಕಟ್ಟಡದ ಮೂರು ಕಡೆಗಳಲ್ಲಿ ಸಿಮೆಂಟ್ ಶೀಟ್‍ನ ಮಾಳಿಗೆ ನಿರ್ಮಿಸಲಾಗಿತ್ತು. ಈಗ ಇದನ್ನು ತೆಗೆದು ಆರ್‍ಸಿಸಿ ನಿರ್ಮಿಸಲಾಗಿದೆ. ಹಿಂದೆ ಕೊಠಡಿಗಳಲ್ಲಿ ಕಿಟಕಿಗಳಿರುವ ಭಾಗದಲ್ಲಿ ಶೌಚಾಲಯ ನಿರ್ಮಿಸಿದ್ದು, ಕಿಟಿಕಿ ಹಾಗೆಯೇ ಉಳಿದುಕೊಂಡಿದೆ. ಶೌಚಾಲಯದಲ್ಲಿ ಕಿಟಕಿ ತೆಗೆದು, ಫ್ಯಾನ್ ನಿಂದ ದುರ್ವಾಸನೆ ಹೊರಹೋಗುವ ವೆಂಟಿಲೇಟರ್ ಅಳವಡಿಸಲಾಗುತ್ತಿದೆ. ಶೌಚಾಲಯದಲ್ಲಿ ವಾಶ್ ಬೇಸಿನ್, ಕಮೋಡ್, ನಲ್ಲಿ, ನೀರು ಸರಬರಾಜು ವ್ಯವಸ್ಥೆ, ಸೋಲಾರ್ ಸೇರಿದಂತೆ ಎಲ್ಲ ಸೌಲಭ್ಯ ಬದಲಿಸಲಾಗಿದೆ.

ಉದ್ಯಾನ: ಹೊರ ಆವರಣದಲ್ಲಿ ಪಾರ್ಕಿಂಗ್‍ಗೆ ಸೂಕ್ತ ವ್ಯವಸ್ಥೆಯಿಲ್ಲ. ಇಲ್ಲಿ ಪೂರ್ಣವಾಗಿ
ಸಿಮೆಂಟ್ ನೆಲಹಾಸು ನಿರ್ಮಿಸಿ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆವರಣದಲ್ಲಿ ಕೆಲವೆಡೆ ಮರಗಳಿವೆ. ಇಲ್ಲಿ ಸುಂದರ ಉದ್ಯಾನ ನಿರ್ಮಿಸಿ ಹೆಚ್ಚು ಸಸಿ, ಮರ ನೆಡಲಾಗುತ್ತದೆ. ಕಟ್ಟಡದ ಕಾಂಪೌಂಡ್ ಕೂಡ ದುರಸ್ತಿ ಮಾಡಲಾಗುತ್ತಿದೆ. ಕಟ್ಟಡದ ಒಳಗಿನ ಮಧ್ಯಭಾಗದಲ್ಲಿ ಖಾಲಿ ಆವರಣವಿದ್ದು, ಇಲ್ಲಿಯೂ ಉದ್ಯಾನ ನಿರ್ಮಿಸಲಾಗುವುದು.

ಹೊಸ ರೂಪ ಕಾರಿಡಾರ್‍ನಲ್ಲಿ ಗ್ರಾನೈಟ್ ನೆಲಹಾಸು, ಮೆಟ್ಟಿಲಿಗೆ ಗ್ರಾನೈಟ್ ಆವರಣದಲ್ಲಿ ಸಿಮೆಂಟ್ ನೆಲಹಾಸು ಹಾಗೂ ಉದ್ಯಾನ, ಪಾರ್ಕಿಂಗ್ ವ್ಯವಸ್ಥೆ ಅಂದಾಜು 3,000 ಮೀ. ಉದ್ದದ ನೀರಿನ ಕೊಳವೆ ಬದಲಾವಣೆ, ಸಿಪಿವಿಸಿ ಪೈಪ್ ಅಳವಡಿಕೆ ಕಟ್ಟಡದ ಸಂಪೂರ್ಣ ಸೀಲಿಂಗ್ ಹಾಗೂ ಪ್ಲಾಸ್ಟರಿಂಗ್ ಒಳ ಆವರಣದಲ್ಲಿ ಉದ್ಯಾನ ಶೌಚಾಲಯಗಳಲ್ಲಿ ವೆಂಟಿಲೇಟರ್ ಕಾವೇರಿ ಹಿನ್ನೆಲೆ 1955ರಲ್ಲಿ ಕಾವೇರಿ ಅತಿಥಿಗೃಹ ನಿರ್ಮಾಣವಾದಾಗ ನೆಲಮಹಡಿ ಹಾಗೂ ಮೊದಲನೇ ಮಹಡಿ ಮಾತ್ರವಿತ್ತು. ನಂತರ 1971ರಲ್ಲಿ ಎರಡನೇ ಮಹಡಿ ನಿರ್ಮಿಸಲಾಯಿತು. 1.17 ಎಕರೆಯ 62,135 ಚ.ಅಡಿ ವಿಸ್ತೀರ್ಣದಲ್ಲಿ ನಿವೇಶನವಿದೆ.
7,790 ಚ.ಅಡಿಗಳಲ್ಲಿ ತಳಪಾಯ ನಿರ್ಮಿಸಿದ್ದು, 19,650 ಚ.ಅಡಿಗಳಲ್ಲಿ ಕಟ್ಟಡ ನಿರ್ಮಾಣವಾಗಿದೆ.

ನೆಲಮಹಡಿಯಲ್ಲಿ 25, ಮೊದಲ ಮಹಡಿಯಲ್ಲಿ 27 ಹಾಗೂ ಎರಡನೇ ಮಹಡಿಯಲ್ಲಿ 27 ಕೊಠಡಿ ಸೇರಿದಂತೆ ಒಟ್ಟು 79 ಕೊಠಡಿಗಳಿವೆ. ಮೊದಲ ಮಹಡಿಯ 27 ಕೊಠಡಿ ವಿಧಾನಸಭೆ ಸಚಿವಾಲಯದ ವಶಕ್ಕೆ ನೀಡಿದ್ದು, ಕಾಯ್ದಿರಿಸುವಿಕೆ ಹಾಗೂ ಹಂಚಿಕೆಯ
ಅ„ಕಾರ ಸಚಿವಾಲಯಕ್ಕೆ ಸೇರಿದೆ. ಒಂದು ಹಾಸಿಗೆಯ 3 ಹಾಗೂ ಎರಡು ಹಾಸಿಗೆಯ
76 ಕೊಠಡಿಗಳಿವೆ. ವರ್ಷಕ್ಕೆ ಸರಾಸರಿ 40 ಸಾವಿರ ಮಂದಿ ಇಲ್ಲಿ ತಂಗುತ್ತಾರೆ ಹಾಗೂ
ವರ್ಷಪೂರ್ತಿ ಕೊಠಡಿಗಳು ಭರ್ತಿಯಾಗಿರುತ್ತವೆ.

ದಿನ ಬಾಡಿಗೆ
ಅಧಿಕಾರಿಗಳು: 120 ರೂ
ಹಾಲಿ ಶಾಸಕರು, ಹಾಲಿ ಸಂಸದರು: 180 ರೂ
ಮಾಜಿ ಶಾಸಕರು, ಮಾಜಿ ಸಂಸದರು: 210 ರೂ
ಖಾಸಗಿ: 450 ರೂ
(ನವೀಕರಣದ ನಂತರ ಬಾಡಿಗೆ ಏರಿಸಲು
ನಿರ್ಧರಿಸಲಾಗಿದೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com