ರಾಜಧಾನಿಯ ಶೇ.62ರಷ್ಟು ಅಂಗನವಾಡಿ ಸುರಕ್ಷಿತವಿಲ್ಲ

ನಗರದಲ್ಲಿನ ಶೇ.62ರಷ್ಟು ಅಂಗನವಾಡಿಗಳು ಸುರಕ್ಷಿತವಾಗಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಕಟ್ಟಡಗಳಿಲ್ಲ...
ಸಾಂದರ್ಭಿಕ ಚಿತ್ರ ಮತ್ತು ಬಲಚಿತ್ರದಲ್ಲಿ ಇರುವವರು ಡಾ.ಕೃಪಾ ಆಳ್ವ
ಸಾಂದರ್ಭಿಕ ಚಿತ್ರ ಮತ್ತು ಬಲಚಿತ್ರದಲ್ಲಿ ಇರುವವರು ಡಾ.ಕೃಪಾ ಆಳ್ವ

ಬೆಂಗಳೂರು: ನಗರದಲ್ಲಿನ ಶೇ.62ರಷ್ಟು ಅಂಗನವಾಡಿಗಳು ಸುರಕ್ಷಿತವಾಗಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಕಟ್ಟಡಗಳಿಲ್ಲ. ಮಕ್ಕಳಿಗೆ ಪೂರೈಸುವ ಪೌಷ್ಟಿಕ ಆಹಾರ ಕೂಡ ಕಳಪೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷೆ ಡಾ.ಕೃಪಾ ಆಳ್ವ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಪರಿವರ್ತನಾ ಜನಾಂದೋಲನ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಂಗಳೂರಿನ ಅಂಗನವಾಡಿಗಳ ಸ್ಥಿತಿಗತಿ, ಮಕ್ಕಳ ಆರೋಗ್ಯ ಮತ್ತು ಶಾಲಾ ಪೂರ್ವ ಶಿಕ್ಷಣದ ಸಮಸ್ಯೆ, ಸವಾಲುಗಳು ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿರುವ ಬಹಳಷ್ಟು ಅಂಗನವಾಡಿಗಳನ್ನು ಸಾರ್ವಜನಿಕ ಶೌಚಾಲಯಗಳಲ್ಲಿ ನಡೆಸುತ್ತಿದ್ದಾರೆ. ಇನ್ನು ಕೆಲವು ಕೇಂದ್ರಗಳನ್ನು ಕಟ್ಟಡಗಳೇ ಇಲ್ಲದ ಕಡೆಗಳಲ್ಲಿ ನಡೆಸುತ್ತಿದ್ದಾರೆ. ಮಕ್ಕಳಿಗೆ ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ಆಹಾರವನ್ನು ಒಂದೆಡೆ ಇಡಲು ದಾಸ್ತಾನು ಕೋಣೆಗಳಿಲ್ಲ, ಈ ಸಮಸ್ಯೆಗಳನ್ನು ಆದಷ್ಟು ಬೇಗ ಸರ್ಕಾರದ ಗಮನಕ್ಕೆ ತಂದು ಎಲ್ಲ ಕೇಂದ್ರಗಳಿಗೂ ಭದ್ರ ನೆಲೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಬಾಯಿ ಮಾತಿನ ಆದರ್ಶ:
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವುದು ಕೇವಲ ಬಾಯಿಮಾತಾಗಿದೆ. ಮಕ್ಕಳ ಶಿಕ್ಷಣದ ಜತೆಗೆ ಅವರ ಆರೋಗ್ಯ ಕೂಡ ಕಾಪಾಡುವುದು ಪೋಷಕರ ಕರ್ತವ್ಯ. ಸರ್ಕಾರ ಸಾವಿರಾರು ಕೋಟಿಗಟ್ಟಲೆ ಹಣವನ್ನು ಮಕ್ಕಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡುತ್ತದೆ. ಆದರೆ, ಅದರ ಸಮರ್ಪಕ ಬಳಕೆಯಾಗುತ್ತಿಲ್ಲ. ಅಂಗನವಾಡಿ ಕೇಂದ್ರಗಳ ನಿರ್ವಹಣಾ ವ್ಯವಸ್ಥೆ ಸಮರ್ಪಕವಾಗಿಲ್ಲ. ಯಾವುದೇ ಒಂದು ಯೋಜನೆ ರೂಪಿಸುವುದು ಕಷ್ಟವಲ್ಲ. ಅದರ ನಿರ್ವಹಣೆ ಮುಖ್ಯ. ಎಲ್ಲ ಅಂಗನವಾಡಿಗಳಲ್ಲಿ ನಿರ್ವಹಣೆ ಕೊರತೆಯಿದೆ ಎಂಬುದು ಸಾಮಾಜಿಕ ಪರಿವರ್ತನಾ ಜನಾಂದೋಲನ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಡಾ.ಆಳ್ವ ಹೇಳಿದರು.

ಅಂಗನವಾಡಿ ಕೇಂದ್ರಗಳಲ್ಲಿ ಶುಚಿತ್ವದ ಕೊರತೆಯಿದೆ.ಕೆಲವೊಂದು ಕಡೆ ಶೌಚಾಲಯವನ್ನೇ ಕೇಂದ್ರವನ್ನಾಗಿ ಮಾಡಲಾಗಿದ್ದು ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪೌಷ್ಠಿಕ ಆಹಾರ ಕೂಡ ಮಕ್ಕಳಿಗೆ ದೊರೆಯುತ್ತಿಲ್ಲ. ಎಲ್ಲವೂ ಕಳಪೆಯಾಗಿದೆ. ಅದರ ಬಗ್ಗೆ
ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com