

ಬೆಂಗಳೂರು: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ 2015ರ ಮಾರ್ಚ್‍ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ಸಾರ್ವತ್ರಿಕ ಪರೀಕ್ಷಾ ಕಾರ್ಯದಲ್ಲಿ ಲೋಪವೆಸಗಿದ್ದ 12 ಪರೀಕ್ಷಾ ಮೇಲ್ವಿಚಾರಕ ರನ್ನು ಸರ್ಕಾರ ಅಮಾನತುಗೊಳಿಸಿದೆ.
ಈ ಕುರಿತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, `ಸಾರ್ವತ್ರಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಸರಿಯಾಗಿ ನಮೂದಾಗದೇ ಇರುವುದು, ಉತ್ತರ ಪತ್ರಿಕೆ ಹರಿದಿರುವುದು ಇತ್ಯಾದಿ ಕಾರಣಗಳಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಪರಿಕ್ಷಾ ಮೇಲ್ವಿಚಾರಕರ ಕರ್ತವ್ಯವಾಗಿರುತ್ತದೆ.
ಈ ಕರ್ತವ್ಯಲೋಪ ಎಸಗಿರುವ ಪರೀಕ್ಷಾ ಮೇಲ್ವಿಚಾಕರ ಮೇಲೆ ಕ್ರಮಕೈಗೊಳ್ಳಿ ಎಂದು ಮೂರು ವಿಭಾಗಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದೆ. ಅದರಂತೆ ಅಮಾನತು ಮಾಡಿದ್ದಾರೆ' ಎಂದು ವಿವರಿಸಿದರು. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಉಪನ್ಯಾಸಕರು ಪರೀಕ್ಷಾ ಮೇಲ್ವಿಚಾರಣಾ ಕೆಲಸ ನಿರ್ವಹಿಸಿದ್ದರು. ಹೀಗಾಗಿ ಈ ಮೂರು ವಿಭಾಗದ ಮುಖ್ಯಸ್ಥರಿಗೆ ಸಾಮಾನ್ಯ ಆದೇಶ ನೀಡಿದ್ದೆ. ಮೊದಲ ಹಂತದಲ್ಲಿ 12 ಮಂದಿ ಅಮಾನತಾಗಿದ್ದಾರೆ ಎಂದರು.
ದ್ವಿತೀಯ ಪಿಯುಸಿ ಗೊಂದಲಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಕೇಳಲಾಗಿದೆ. ಅದು ಬರುವುದು ತಡವಾಗುತ್ತದೆ. ಹೀಗಾಗಿ ಖಡಕ್ ಸಂದೇಶ ರವಾನಿಸಬೇಕೆಂಬ ಕಾರಣಕ್ಕೆ ಸಾಮಾನ್ಯ ಆದೇಶ ನೀಡಿ, ಲೋಪ ಎಸಗಿರುವ ಮೇಲ್ವಿಚಾರಕರ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೆ ಎಂದು ಹೇಳಿದರು. ಅಮಾನತು ಆದೇಶ ಶಿಕ್ಷೆಯೇನಲ್ಲ. ಸಮಗ್ರ ತನಿಖೆ ವರದಿಯಲ್ಲಿ ಲೋಪಗಳಿಲ್ಲ ಎಂದು ಕಂಡುಬಂದಲ್ಲಿ ಅವರ ಮೇಲೆ ಮುಂದೆ ಯಾವುದೇ ಕ್ರಮಕೈಗೊಳ್ಳಲಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
Advertisement