ಜನ ಕೈಜೋಡಿಸಿದರೆ ಮಾತ್ರ ಕೆರೆ ಉಳಿವು ಸಾಧ್ಯ: ನ್ಯಾ.ಮಜಗೆ

ರಾಜ್ಯದ ಎಲ್ಲಾ ಕೆರೆಗಳನ್ನು ಸಂರಕ್ಷಿಸಲು ಸರ್ಕಾರಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಪ್ರಯತ್ನಿಸಬೇಕು ಎಂದು ಉಪಲೋಕಾಯುಕ್ತ ನ್ಯಾ. ಎಸ್.ಬಿ.ಮಜಗೆ ಕಿವಿಮeತು ಹೇಳಿದರು...
ಅಲ್ಲಾಳಸಂದ್ರ ಕೆರೆಹಬ್ಬದಲ್ಲಿ ಪೊಲೀಸ್ ಮಹಿಳಾ ಸಿಬ್ಬಂದಿ ಪಗಡೆ ಆಟ ಆಡಿ ಸಂಭ್ರಮಿಸಿದ ಕ್ಷಣ.
ಅಲ್ಲಾಳಸಂದ್ರ ಕೆರೆಹಬ್ಬದಲ್ಲಿ ಪೊಲೀಸ್ ಮಹಿಳಾ ಸಿಬ್ಬಂದಿ ಪಗಡೆ ಆಟ ಆಡಿ ಸಂಭ್ರಮಿಸಿದ ಕ್ಷಣ.

ಬೆಂಗಳೂರು: ರಾಜ್ಯದ ಎಲ್ಲಾ ಕೆರೆಗಳನ್ನು ಸಂರಕ್ಷಿಸಲು ಸರ್ಕಾರಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಪ್ರಯತ್ನಿಸಬೇಕು ಎಂದು ಉಪಲೋಕಾಯುಕ್ತ ನ್ಯಾ. ಎಸ್.ಬಿ.ಮಜಗೆ ಕಿವಿಮಾತು ಹೇಳಿದರು.

ಬಿಬಿಎಂಪಿ, ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯಲಹಂಕ ಯುನೈಟೆಡ್ ಎನ್ವಿರಾನ್ ಮೆಂಟ್ ಅಸೋಸಿಯೇಷನ್ ಅಲ್ಲಾಳಸಂದ್ರ ಕೆರೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ `ಕೆರೆ ಹಬ್ಬ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಿನ ಕೆರೆಗಳು ಒತ್ತುವರಿ, ಮಾಲಿನ್ಯದಂತಹ ಗಂಭೀರ ಸಮಸ್ಯೆಗಳಿಗೆ ಒಳಗಾಗಿವೆ. ಕೆರೆಯ ಬಳಿ ವಾಸಿಸುವ ಸ್ಥಳೀಯರು, ಸಂಘ-ಸಂಸ್ಥೆಗಳು ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.

ಸರ್ಕಾರ ಮಾತ್ರ ಕೆರೆಗಳನ್ನು ಉಳಿಸಲು ಸಾಧ್ಯವಿಲ್ಲ. ಸಾರ್ವಜನಿಕರು ತಾವೇ ಮುಂದೆ ಬಂದು ಕೆರೆಗಳ ಬಗ್ಗೆ ಕಾಳಜಿ ವಹಿಸಿದರೆ, ಶುದ್ಧ ನೀರಿನ ಪ್ರಮಾಣ ಹೆಚ್ಚುವುದರೊಂದಿಗೆ
ಅಂತರ್ಜಲ ಮಟ್ಟವೂ ಅಧಿಕವಾಗುತ್ತದೆ. ಮುಂದಿನ ಜನಾಂಗಕ್ಕಾಗಿ ಕೆರೆಗಳನ್ನು ಉಳಿಸಬೇಕಿದ್ದು, ಬರಿದಾಗುತ್ತಿರುವ ಭೂಮಿ ತಂಪು ಮಾಡಲು ಶ್ರಮಿಸಬೇಕು ಎಂದರು. ನಗರದಲ್ಲಿ ಈಗ ಬೆರಳೆಣಿಕೆಯಷ್ಟು ಕೆರೆಗಳು ಅಸ್ತಿತ್ವ ಉಳಿಸಿಕೊಂಡಿದ್ದು, ಸಾರ್ವಜನಿಕರು ಅವನ್ನು ತಮ್ಮದೆಂದೇ ತಿಳಿದು ಕಾಪಾಡಬೇಕು.

ಕೆರೆಗಳು ಸಾರ್ವಜನಿಕ ಸಂಪನ್ಮೂಲ ಎಂದು ಪರಿಗಣನೆಯಾದರೆ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಈ ಹಿಂದೆ ಅಲ್ಲಾಳಸಂದ್ರ ಕೆರೆಗೆ ಭೇಟಿ ನೀಡಿದಾಗ ನೀರು ಅಪಾರ ಪ್ರಮಾಣದಲ್ಲಿ ಕಲುಷಿತಗೊಂಡಿತ್ತು. ಸಂಘ-ಸಂಸ್ಥೆಗಳ ಪ್ರಯತ್ನದಿಂದ ನೀರು ಸ್ವಲ್ಪಮಟ್ಟಿಗೆ ಸ್ವಚ್ಛವಾಗಿದ್ದು, ಜನರಲ್ಲಿ ಕೆರೆ ಸಂರಕ್ಷಣೆ ಬಗ್ಗೆ ಅರಿವು ಮೂಡುತ್ತಿದೆ. ಈಗಲೇ ಕೆರೆಗಳನ್ನು ಉಳಿಸಿಕೊಳ್ಳದಿದ್ದರೆ, ಮುಂದಿನ ಜನಾಂಗಕ್ಕೆ ಬರಿಯ ಭಾವಚಿತ್ರಗಳಲ್ಲಿ ಕೆರೆಗಳನ್ನು ತೋರಿಸಬೇಕಾಗುತ್ತದೆ ಎಂದು ಮಜಗೆ ಹೇಳಿದರು.

ದೂರುಗಳಿಂದ ಅಭಿವೃದ್ಧಿ: ಅಲ್ಲಾಳಸಂದ್ರ ಕೆರೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದರಿಂದ ಸರ್ಕಾರ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಕೆರೆಯ ನೀರು ಅಶುದ್ಧವಾಗಿರುವುದು ಹಾಗೂ ಸಂರಕ್ಷಣೆಯ ವಿಚಾರದಲ್ಲಿ ಅವ್ಯವಸ್ಥೆ ಹೆಚ್ಚಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಿಂದ ಕೆರೆ ಅಭಿವೃದ್ಧಿ  ಕಾರ್ಯ ನಡೆಯುತ್ತಿದೆ ಎಂದರು.

ಸಚಿವ ರಾಮಲಿಂಗಾರೆಡ್ಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ್ ಆಚಾರ್ಯ, ಶಾಸಕ ವಿಶ್ವನಾಥ್ ಕೆರೆಹಬ್ಬದಲ್ಲಿ ಪಾಲ್ಗೊಂಡಿದ್ದರು.

ಹಬ್ಬದಲ್ಲಿ ಕಾರ್ಯಕ್ರಮ

ಕೆರೆಹಬ್ಬ ಅಂಗವಾಗಿ ಸ್ಥಳೀಯರನ್ನೊಳ ಗೊಂಡಂತೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಯೋಗ, ಸೈಕಲ್ ಜಾಥಾ, ಗಾಳಿ ಪಟ, ಮ್ಯಾಜಿಕ್ ಶೋ ಸೇರಿದಂತೆ ಮನೋರಂಜನೆಯ ಕಾರ್ಯಕ್ರಮಗಳೊಂದಿಗೆ ಕೆರೆ ಬಗ್ಗೆ ಅರಿವು ಮೂಡಿಸಲಾಯಿತು. ಮಹಿಳೆಯರ ಡೊಳ್ಳು ಕುಣಿತ, ಕೀಲು ಕುದರೆ ಕುಣಿತ, ಹುಲಿವೇಷ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತೋಟಗಾರಿಕೆ ಇಲಾಖೆ ಹಾಗೂ ಜಿಕೆವಿಕೆಯಿಂದ ಕೈತೋಟ ಮತ್ತು ತಾರಸಿ ತೋಟ ಪ್ರದರ್ಶನ, ಜಲಮಂಡಳಿಯಿಂದ ಮಳೆಕೊಯ್ಲು ಕುರಿತು ಮಾಹಿತಿ ಕಾರ್ಯಗಾರ, ಬಿಬಿಎಂಪಿಯಿಂದ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ ಕಾರ್ಯಾಗಾರ, ಅರಣ್ಯ ಇಲಾಖೆಯಿಂದ ಉಚಿತ ಸಸಿ ವಿತರಣೆ ಹಾಗೂ ಕನ್ನಡ ಚಲನಚಿತ್ರ ನಡೆದು ಬಂದ ದಾರಿ ಕುರಿತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರಕಲಾ ಪರಿಷತ್ತು ವತಿಯಿಂದ ಕಲಾಕೃತಿ ಪ್ರದರ್ಶನ ಹಾಗೂ ಮಾರಾಟ, ಹಲಸು, ಮಾವುಮೇಳ, ಸಾವಯವ ತರಕಾರಿಗಳ ಮಾರಾಟ ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಲಗೋರಿ, ಬುಗರಿ, ಗೋಲಿ, ಹಾವು ಏಣಿ ಆಟ, ಕಣ್ಣು ಕಟ್ಟಿ ಮಡಕೆ ಹೊಡೆಯುವುದು ಸೇರಿದಂತೆ ಗ್ರಾಮೀಣ ಭಾಗದ ಆಟಗಳ ಸ್ಪರ್ಧೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com