
ಬೆಂಗಳೂರು: ಮಾರಣಾಂತಿಕ `ಲೈಸೊಸೋಮಲ್ ಸ್ಟೊರೇಜ್ ಡಿಸಾರ್ಡರ್' (ಎಲ್‍ಎಸ್‍ಡಿ) ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ನಗರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಈ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು, ಅವರಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಒದಿಗಸುವಂತೆ ಕೋರಿ ಭಾರತೀಯ ಲೈಸೊಸೋಮಲ್ ಸ್ಟೋರೇಜ್ ಡಿಸಾರ್ಡರ್ ಸಂಸ್ಥೆ ಹೈಕೋರ್ಟ್‍ನಲ್ಲಿ ಸಾರ್ವಜಿನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಲೈಸೊಸೋಮಲ್ ಸ್ಟೋರೇಜ್ ಡಿಸಾರ್ಡರ್ ಅನುವಂಶಿಕವಾಗಿ ಮಕ್ಕಳಿಗೆ ಬರುವ ರೋಗವಾಗಿದೆ. 14 ವರ್ಷದ ಒಳಗಿನ ಮಕ್ಕಳು ಮಾತ್ರ ಈ ರೋಗಕ್ಕೆ ತುತ್ತಾಗಲಿದ್ದು, ಅಂತಹ ಮಕ್ಕಳು ಹೆಚ್ಚು ದಿನ ಜೀವಿಸುವುದು ಅಸಾಧ್ಯದ ಸಂಗತಿ. ಏತನ್ಮಧ್ಯೆ ಈ ರೋಗದ ಚಿಕಿತ್ಸೆ ವೆಚ್ಚ ಕೂಡ ದುಬಾರಿಯಾಗಿದ್ದು, ಇದರಿಂದ ಬಡ ಮಕ್ಕಳು ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ಈಚೆಗೆ ದೆಹಲಿ ಹೈಕೋರ್ಟ್ ಸಹ ಈ ರೋಗಕ್ಕೆ ತುತ್ತಾದ ಮಕ್ಕಳಿಗೆ ಸರ್ಕಾರವೇ ತನ್ನ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕು ಎಂದು ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಆದೇಶವನ್ನು ರಾಜ್ಯದಲ್ಲಿ ಅನುಷ್ಟಾನ ಮಾಡಬೇಕು. ನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಈ ರೋಗದಿಂದ ನರಳುತ್ತಿರುವ ಸುಮಾರು 40 ಮಕ್ಕಳಿದ್ದು, ರೋಗದಿಂದ ಗುಣಮುಖರಾಗಲು ಅಗತ್ಯವಾದ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಉಚಿತವಾಗಿ ಕಲ್ಪಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ದೆಹಲಿ ಆದೇಶದಂತೆ ರಾಜ್ಯದಲ್ಲಿ ಈ ರೋಗಕ್ಕೆ ತುತ್ತಾಗಿರುವ ಮಕ್ಕಳಿಗೆ ಅಗತ್ಯವಾದ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
Advertisement