ಬೆಂಗಳೂರು: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿರುವ ಪ್ರಕರಣದ ಅಂತಿಮ ವಿಚಾರಣೆಯನ್ನು ಹೈ ಕೋರ್ಟ್ ಜೂ.18ಕ್ಕೆ ನಿಗದಿಪಡಿಸಿದೆ.
ಗೋಕರ್ಣದ ಮಹಬಲೇಶ್ವರ ದೇವಸ್ಥಾನವನ್ನು ಈ ಹಿಂದೆ ಸರ್ಕಾರ ಡಿನೋಟಿಫೈ ಮಾಡಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿವುದನ್ನು ಪ್ರಶ್ನಿಸಿ ಹಲವಾರು ಜನ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ. ಮುಖರ್ಜಿ ಮತ್ತು ನ್ಯಾ. ರಾಮಮೋಹನ ರೆಡ್ಡಿ ಅವರಿದ್ದ ಪೀಠ, ದೇವಸ್ಥಾನವನ್ನು ಡಿನೋಟಿಫೈ ಮಾಡಿದ್ದ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು. ಒಮ್ಮೆ ಸರ್ಕಾರ ದೇವಸ್ಥಾನವನ್ನು ಮುಜುರಾಯಿ ಇಲಾಖೆ ವ್ಯಾಪ್ತಿಗೆ ಆಗಮಿಸುವುದಾಗಿ ನೋಟಿಫೈ ಮಾಡಿದ ಮೇಲೆ ಯಾವ ಕಾನೂನಿನ ಅನ್ವಯ ಗೋಕರ್ಣ ದೇವಸ್ಥಾನವನ್ನು ಡಿನೋಟಿಫೈ ಮಾಡಿದ್ದೀರಿ? ಒಮ್ಮೆ ಡಿನೋಟಿಫೈ ಮಾಡಿದ ನಂತರ ಅದನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಜರೂರಾದರೂ ಏನಿತ್ತು ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.
ಇದಕ್ಕೆ ನಿರುತ್ತರರಾದ ವಕೀಲರು ಈ ಕುರಿತು ಅಡ್ವೊಕೇಟ್ ಜನರಲ್ ಅವರ ಬಳಿ ಮಾಹಿತಿ ಪಡೆಯಬೇಕಿದ್ದು ವಿಚಾರಣೆ ಮುಂದೂಡುವಂತೆ ಕೋರಿದರು. ಈ ಮಧ್ಯೆ ಮಠದವರೂ ಸಹ ಈ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ವಿಭಾಗೀಯ ಪೀಠ, ಜೂ.18ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿ ವಿಚಾರಣೆ ಮುಂದೂಡಿದೆ.
ಏನಿದು ವಿವಾದ?
2003ರ ಮೇ 1ರಂದು ರಾಜ್ಯ ಸರ್ಕಾರ 32,545 ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಸೆಕ್ಷನ್ 23(1)ರ ಪ್ರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಆಗಮಿಸುವುದಾಗಿ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಗೋಕರ್ಣದ ಮಹಬಲೇಶ್ವರ ದೇವಸ್ಥಾನವೂ ಸಹ ಒಂದಾಗಿತ್ತು. ಐದು ವರ್ಷದ ನಂತರ 2008ರಲ್ಲಿ ಗೋಕರ್ಣ ದೇವಸ್ಥಾನವನ್ನು ಡಿನೋಟಿಫೈ ಮಾಡಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದರು. ಇದನ್ನು ಪ್ರಶ್ನಿಸಿ ಭಕ್ತ ಸಮೂಹ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.
Advertisement