ಇನ್ನೇನಿದ್ದರೂ ಮಳೆ ಹಾನಿ ವರದಿ

ಕೇಂದ್ರದ ನೆರೆ ಹಾನಿ ಅಧ್ಯಯನ ತಂಡ ರಾಜ್ಯಕ್ಕೆ ಮಂಗಳವಾರ ಭೇಟಿ ನೀಡಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್ ಹಾಗೂ ಕಲಬುರಗಿಯಲ್ಲಿ ನೆರೆ ಹಾನಿ ಬಗ್ಗೆ ಪರಿಶೀಲನೆ ನಡೆಸಿದೆ...
ಚಿಕ್ಕಬಳ್ಳಾಪುರದ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿದ ಕೇಂದ್ರ ನೆರೆ ಹಾನಿ ಅಧ್ಯಯನ ತಂಡ ಪರಿಶೀಲನೆ ನಡೆಸಿತು.
ಚಿಕ್ಕಬಳ್ಳಾಪುರದ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿದ ಕೇಂದ್ರ ನೆರೆ ಹಾನಿ ಅಧ್ಯಯನ ತಂಡ ಪರಿಶೀಲನೆ ನಡೆಸಿತು.

ಬೆಂಗಳೂರು: ಕೇಂದ್ರದ ನೆರೆ ಹಾನಿ ಅಧ್ಯಯನ ತಂಡ ರಾಜ್ಯಕ್ಕೆ ಮಂಗಳವಾರ ಭೇಟಿ ನೀಡಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್ ಹಾಗೂ ಕಲಬುರಗಿಯಲ್ಲಿ ನೆರೆ ಹಾನಿ ಬಗ್ಗೆ ಪರಿಶೀಲನೆ ನಡೆಸಿದೆ.

ಕೇಂದ್ರ ಕೃಷಿ ಮಂತ್ರಾಲಯದ ಜಂಟಿ ಕಾರ್ಯದರ್ಶಿ, ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಆರ್.ಬಿ. ಸಿನ್ಹಾ, ಅಡಿಷನಲ್ ಕಮಿಷನರ್ ಅನಿಲ್ ಪ್ರತಾಪ್ ಸಿಂಗ್, ಕೇಂದ್ರ ಪವರ್ ಮಿನಿಸ್ಟ್ರಿ ಸಚಿವಾಲಯದ ಡೆಪ್ಯೂಟಿ ಕಮಿಷನರ್ ಎಸ್.ಕೆ. ರಾಜೇಂದ್ರ ನೇತೃತ್ವದ ತಂಡ ರೈತರೊಂದಿಗೆ ಸಮಾಲೋಚನೆ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದೆ. ಜತೆಗೆ ಜಿಲ್ಲಾಡಳಿತದೊಂದಿಗೂ ಚರ್ಚೆ ನಡೆಸಿದೆ. ಒಟ್ಟು ಮೂರು ತಂಡಗಳು ವಿವಿಧೆಡೆ ಭೇಟಿ ನೀಡಿವೆ.
 
ಬಳ್ಳಾರಿಗೆ ಭೇಟಿ:
ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬತ್ತ, ಇತರ ಬೆಳೆಯ ಪ್ರದೇಶಗಳಿಗೆ ಭೇಟಿ ನೀಡಿದ ತಂಡ, ಮಂಗಳವಾರ ಸಿರುಗುಪ್ಪ ತಾಲೂಕಿನ ದೇವಿನಗರ, ಇತರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಜಿಲ್ಲಾಧಿಕಾರಿ ಸಮೀರ್ ಶುಕ್ಲ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ತಾಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದಾಗಿ ಬತ್ತದ ಬೆಳೆ ಸಂಪೂರ್ಣ ನಾಶವಾಗಿದೆ ಎಂದರು.

ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಮಾತನಾಡಿ, ಎರಡು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವಿನ ಹಂತದಲ್ಲಿದ್ದ ಬತ್ತದ ಬೆಳೆ ನೆಲಕಚ್ಚಿ ಸಂಪೂರ್ಣ ಹಾನಿಗೊಳಗಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಶಿಫಾರಸು ಮಾಡುವಂತೆ ಮನವಿ ಮಾಡಿದರು. ಬೆಳೆಹಾನಿಯ ಭಾವಚಿತ್ರಗಳನ್ನು ಕೇಂದ್ರ ತಂಡದ ಸದಸ್ಯರಿಗೆ ತೋರಿಸಿದರು.

ಗಂಗಾವತಿಯಲ್ಲಿ ಪರಿಶೀಲನೆ:
ಕಳೆದ ಎರಡು ತಿಂಗಳ ಹಿಂದೆ ಗಂಗಾವತಿ ತಾಲೂಕಿನಾದ್ಯಂತ ಸುರಿದ ಆಲಿಕಲ್ಲು ಮಳೆಯಿಂದಾಗಿ ಭತ್ತ ನಷ್ಟವಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ತಂಡ ನಗರಕ್ಕೆ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದರು. ನಗರದ ಆನೆಗೊಂದಿ ರಸ್ತೆಯಲ್ಲಿರುವ ಸಕ್ರ್ಯುಟ್‍ಹೌಸ್‍ನಲ್ಲಿ ಸರ್ಕಾರದ ಕಾರ್ಯದರ್ಶಿ ರಾಜಕಮಲ್ ಖತ್ರಿ ಸಭೆ ನಡೆಸಿದರು. ಗಂಗಾವತಿ ತಾಲೂಕಿನಲ್ಲಿ 70 ಸಾವಿರ ಎಕರೆ ಬತ್ತ ಮತ್ತು 678 ಎಕರೆ ಬಾಳೆ ಬೆಳೆ ಹಾನಿಯಾಗಿದೆ. ರು.210 ಕೋಟಿ ನಷ್ಟವಾಗಿದ್ದು, ಸರ್ಕಾರ 1 ಎಕರೆಗೆ ರು.30 ಸಾವಿರ ಪರಿಹಾರ ನೀಡಬೇಕೆಂಬ ಮನವಿ ಸಲ್ಲಿಕೆಯಾಯಿತು. ಸಂಸದ ಕರಡಿ ಸಂಗಣ್ಣ, ಕೊಪ್ಪಳ ಜಿಲ್ಲೆಯಲ್ಲಿ ಬತ್ತ ನಷ್ಟವಾದ ಬಗ್ಗೆ ವಿವರ ನೀಡಿದರು.

ರಾಯಚೂರಿಗೆ ಭೇಟಿ:
ಮಳೆಯಿಂದ ಅಪಾರ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ಕೇಂದ್ರದ ತಂಡ ಭೇಟಿ ನೀಡಿದ್ದರೂ ರೈತರಲ್ಲಿ ನಿರಾಸೆ ತಂದಿದೆ. ಕಳೆದ ಏ.13, 23ರಂದು ಸುರಿದ ಬಿರುಗಾಳಿ ಮಳೆಗೆ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬತ್ತ ಹಾನಿಯಾಗಿತ್ತು.

ಸಿಂಧನೂರು ತಾಲೂಕಿನಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದ ಬತ್ತ ಹಾನಿಯಾಗಿತ್ತು. ಈ ಬಗ್ಗೆ ಅಧ್ಯಯನಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ರೈತರ, ಜನಪ್ರತಿನಿಧಿಗಳ, ಅಧಿಕಾರಿಗಳ ನಿರೀಕ್ಷೆಯಂತೆ ಅಧ್ಯಯನ ತಂಡ ಸಮಗ್ರವಾಗಿ ವೀಕ್ಷಿಸಲಿಲ್ಲ. ಒಂದಿಬ್ಬರು ರೈತರೊಂದಿಗೆ ಚರ್ಚಿಸಲು ಪ್ರಯತ್ನಿಸಿದರು. ಅವರ ಇಂಗ್ಲಿಷ್ ರೈತರಿಗೆ ಅರ್ಥವಾಗಲಿಲ್ಲ. ಪತ್ರಕರ್ತರು ಮಾತನಾಡಿಸಲು ಪ್ರಯತ್ನಿಸಿದರೆ ಜಿಲ್ಲಾಧಿಕಾರಿಗಳು ಅವಕಾಶ ನೀಡಲಿಲ್ಲ. ಒಂದೇ ದಿನದಲ್ಲಿ ಮೂರು ಜಿಲ್ಲೆಗಳ ಭೇಟಿ ಕಾರ್ಯಕ್ರಮವೇ ಈ ಅವಸರಕ್ಕೆ ಕಾರಣ ಎನ್ನಲಾಗಿದೆ. ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಶಿಡ್ಲಘಟ್ಟಕ್ಕೂ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com