
ಬೆಂಗಳೂರು: ದೇವರನ್ನು ನಾಶ ಮಾಡದ ಹೊರತು ನಮ್ಮ ಸಮಾಜದಲ್ಲಿ ಜಾತಿ, ಧರ್ಮ ನಿರ್ಮೂಲನೆ ಸಾಧ್ಯವಿಲ್ಲ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಖಾರವಾಗಿ ನುಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಬ್ಬನ್ ಪಾರ್ಕ್‍ನ ಎನ್‍ಜಿಒ ಸಭಾಂಗಣದಲ್ಲಿ ಏರ್ಪಡಿಸಿದ್ದ `ಬಹುಜನ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ 77ನೇ ಜನ್ಮದಿನಾಚರಣೆ ಅಂಗವಾಗಿ ಅವರ ಬದುಕು ಮತ್ತು ಹೊರಾಟ ಕುರಿತು-ಒಂದು ವಿಶೇಷ ಚರ್ಚೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಅವರ ದಾರಿಯಲ್ಲೇ ನಡೆದ ಬಿ.ಕೃಷ್ಣಪ್ಪ, ಸಮಾಜದಲ್ಲಿ ಜಾತಿ ನಿರ್ಮೂಲನೆ ಮಾಡಿ ಸಮಾನತೆ ತರಬೇಕು ಎಂದು ಹೋರಾಡಿದವರು. ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಅಸ್ಪೃಶ್ಯತೆ ಹೋಗಲಾಡಿಸಲು ಮತ್ತೆ ಚಳವಳಿ ಆರಂಭಿಸಬೇಕು. ಹಾಗಾಗಿ ಸಮಾಜದಲ್ಲಿರುವ ಜಾತಿಗೊಬ್ಬ ದೇವರನ್ನು ನಿರ್ಮೂಲನೆ ಮಾಡಬೇಕು ಎಂದರು.
ಕಳೆದ ಶತಮಾನ ಗಾಂಧಿ ಶತಮಾನ. ಈಗಿನ ಹೊಸಶತಮಾನ ಅಂಬೇಡ್ಕರ್, ಪೆರಿಯಾರ್ ಶತಮಾನ. ಅವರ ತತ್ವಗಳನ್ನು ಆಧರಿಸಿ, ಆ ಚಿಂತನೆಗಳ ಅಳವಡಿಕೆ ನಿಟ್ಟಿನಲ್ಲಿ ನಾವು ಮುಂದೆ ಸಾಗಬೇಕು. ಅದಕ್ಕೆ ಮತ್ತೆ ನಾವು ಹಿಂದಕ್ಕೆ ಹೋಗಬೇಕು. ಸಮಾಜವಾದಿಗಳಿಗೆ ಜಾತಿಯಷ್ಟೇ ವರ್ಗವೂ ಮುಖ್ಯ. ಹಾಗಾಗಿ ಪ್ರಗತಿಪರ ಮಾನವೀಯ ಚಳವಳಿಗೆ ಮಾದರಿಯಾಗಿ ಡಿಎಸ್‍ಎಸ್ ಬೆಳೆಯಬೇಕು.
ಮಾರ್ಕ್ಸ್ ವಾದಿ ಲೋಹಿಯಾ, ಪೆರಿಯಾರ್ ಅಂತಹವರು 70ರ ದಶಕದಲ್ಲಿ ಚಳವಳಿ ಆಗಿ ಮಾರ್ಪಾಡಾದವು. ಅಂತಹ ಚಳವಳಿಗಳು ಮತ್ತೆ ನಡೆಯಬೇಕಿದೆ. ನಾವು ಅಧಿಕಾರ ಹಿಡಿಯದ ಹೊರತು ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ವರ್ತಮಾನದ ಸಮಸ್ಯೆ ಬಗ್ಗೆ ಚಿಂತಿಸಬೇಕು. ಈ ಮೂಲಕ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕು. ಅದೇ ಹಾದಿಯಲ್ಲಿ ಬಿ.ಕೃಷ್ಣಪ್ಪ ಸಾಗುತ್ತಿದ್ದರು ಎಂದರು.
ಈಗ ಚುನಾವಣೆಯಲ್ಲಿ ಗೆಲವು ಸಾಥಿಸಿರುವ ಅಭ್ಯರ್ಥಿಗಳು ಉತ್ತಮವಾಗಿ ಕೆಲಸ ಮಾಡಬೇಕು. ಜನರು ಆತನನ್ನು ಇನ್ನೂ ಉನ್ನತ ಅಧಿಕಾರಕ್ಕೆ ಏರಿಸುವಂತೆ ಜನರಿಗಾಗಿ ದುಡಿಯಬೇಕು. ದೇಶಾದ್ಯಂತ ಇರುವ ಭ್ರಷ್ಟಾಚಾರ ಇಂದು ಗ್ರಾಮಗಳಿಗೂ ವ್ಯಾಪಿಸಿದೆ. ಅಲ್ಲಿಯೂ ಇಂದು ಹಾಳು ರಾಜಕೀಯ ಮನೆ ಮಾಡಿದೆ. ಗ್ರಾಮಗಳಲ್ಲಿನ ಜಾತಿ ರಾಜಕೀಯ ಕುಟುಂಬಗಳನ್ನೇ ನಾಶ ಮಾಡುವಂತೆ ಬೆಳೆದಿದೆ. ಭ್ರಷ್ಟಾಚಾರ ಸಂಪೂರ್ಣವಾಗಿ ಗ್ರಾಮಗಳಿಗೆ ನುಗ್ಗಿದೆ ಎಂದರು.
ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನ್‍ರಾಜ್, ಸಂಘಟನಾ ಸಂಚಾಲಕ ಪರಶುರಾಮ್ ನೀಲನಾಯಕ, ಪ್ರತಿಭಾವತಿ, ಮುರಳೀಧರ್ ಹಾಲಪ್ಪ ಮತ್ತಿತರರು ಉಪ ಸ್ಥಿತರಿದ್ದರು.
Advertisement