
ಬೆಂಗಳೂರು: ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಅಗತ್ಯವೇ ಇಲ್ಲದಿರುವಾಗ ರೇಸ್ ನಡೆಯುವ ಅವಶ್ಯತೆಯೂ ಇರುವುದಿಲ್ಲ. ಇಂತಹ ಹುದ್ದೆ ಅಗತ್ಯವಿದ್ದರೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟನೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆಯ ರೇಸ್‍ನಲ್ಲಿ ನಿಮ್ಮ ಹೆಸರಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಅಗತ್ಯವೇ ಇಲ್ಲ. ಹುದ್ದೆಯೇ ಇಲ್ಲ ಎಂದ ಮೇಲೆ ರೇಸ್ ನಡೆಯುವ ಅಗತ್ಯವೂ ಇರುವುದಿಲ್ಲ. ಪಕ್ಷದ ನಾಯಕಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿದೆ. ಸಭೆಯಲ್ಲಿ ಪಕ್ಷ ಬಲಪಡಿಸುವ, ಸದಸ್ಯತ್ವ ಅಭಿಯಾನ ನಡೆಸುವ ಬಗ್ಗೆ ಚರ್ಚೆಯಾಗಿದೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಅಧಿವೇಶನ, ಸಂಪುಟ ನಿರ್ಧಾರ: ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಅಧಿವೇಶನ ನಡೆಸುವ ಬಗ್ಗೆ ಜೂ.11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ. ಎರಡೂ ಕಡೆ ಅಧಿವೇಶನ ನಡೆಸುವ ಸರ್ಕಾರದ ನಿಲುವಿನ ಬಗ್ಗೆ ಬಿಜೆಪಿ ಟೀಕಿಸುತ್ತಿದ್ದರೂ, ಆ ಪಕ್ಷದ ಮುಖಂಡರಲ್ಲೇ ಗೊಂದಲವಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದರು.
Advertisement