
ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ `ಡಿಜಿಟಲ್ ಇಂಡಿಯಾ'ದ ಕನಸು ನನಸಾಗಬೇಕಾದರೆ, ಅದು ಕರ್ನಾಟಕದ ಮೂಲಕವೇ ಸಾಧ್ಯ ಎಂದು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್. ಆರ್.ಪಾಟೀಲ್ ಪ್ರತಿಪಾದಿಸಿದರು. ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರದ ನೂತನ ಕಟ್ಟಡವನ್ನು ಗುರುವಾರ ಸಂಪಿಗೆ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಪ್ರಪಂಚದಲ್ಲಿಯೇ 2ನೇ ಸ್ಥಾನ ದಲ್ಲಿದೆ. 40 ಲಕ್ಷಕ್ಕೂ ಹೆಚ್ಚು ಯುವಕ- ಯುವತಿಯರು ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. 1 ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು `ಡಿಜಿಟಲ್ ಇಂಡಿಯಾ' ಯೋಜನೆಗೆ ಕರ್ನಾಟಕವನ್ನೇ ಪ್ರಾಯೋಗಿಕ ರಾಜ್ಯವನ್ನಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಆದಾಯ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ. 2013-14ರಲ್ಲಿ ಇದರ ರಫ್ತು ರು. 1.60 ಕೋಟಿಯಷ್ಟಿತ್ತು. 2014-15ಕ್ಕೆ ರು.2 ಲಕ್ಷ ಕೋಟಿಗೆ ಏರಿದೆ. 2020ರ ಹೊತ್ತಿಗೆ ಈ ಕ್ಷೇತ್ರದ ರಫ್ತು ಆದಾಯವನ್ನು ರು.4 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. ಹೊಸ ಮನ್ವಂತರ: 1986ರಿಂದಲೇ ರಾಜ್ಯದಲ್ಲಿ ದೂರ ಸಂವೇದಿ ಅನ್ವಯಿಕ ಕೇಂದ್ರ ತನ್ನ ಕಾರ್ಯಚಟುವಟಿಕೆ ಆರಂಭಿಸಿದೆ. ಆದರೆ, ಅದಕ್ಕೆ ವ್ಯವಸ್ಥಿತವಾದ ಕಟ್ಟಡ ಇದುವರೆಗೂ ಇರಲಿಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಸಂಸ್ಥೆಗೆ ವಿಶೇಷ ಆದ್ಯತೆ ಕೊಟ್ಟು, ಹೆಚ್ಚಿನ ಅನುದಾನ ಒದಗಿಸಿದ್ದರಿಂದ ಈಗ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ. ಈ ಮೂಲಕ ರಾಜ್ಯದ ಅಭಿವೃದ್ಧಿಯ ಹೊಸ ಮನ್ವಂತರ ಶುರುವಾಗಿದೆ ಎಂದರು.
ಸರ್ಕಾರಕ್ಕೆ ಶ್ಲಾಘನೆ: ಮುಖ್ಯ ಅತಿಥಿಯಾಗಿದ್ದವಿಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿರಂಗನ್ ಮಾತನಾಡಿ, ತಂತ್ರಜ್ಞಾನ ಪೂರಕಅಭಿವೃದ್ಧಿಗೆ ನೆರವಾಗುವ ದೂರ ಸಂವೇದಿ ಅನ್ವಯಿಕ ಕೇಂದ್ರವು ಹೆಚ್ಚು ಉಪಯುಕ್ತ. ಇದರ ಆಧುನಿಕ ವ್ಯವಸ್ಥೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿರುವುದು ಶ್ಲಾಘನೀಯ. ಅರಣ್ಯ, ಜಲ ಸಂಪನ್ಮೂಲ, ಅಂತರ್ಜಲ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿನ ನಿಖರ ಮಾಹಿತಿ ಸಂಗ್ರಹ ಮತ್ತು ಸಂಶೋಧನೆ ಗಳ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಈ ಕೇಂದ್ರವು ನೀಡಲಿದೆ ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಪ್ರಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನು ಸ್ವಾಗತಿಸಿದರು. ಶಾಸಕ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಕಾರದ ಮುಖ್ಯ ಸಚೇತಕ ಆರ್ .ವಿ. ವೆಂಕಟೇಶ್, ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಶಿವಣ್ಣ, ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ ಡಾ. ಡಿ.ಕೆ. ಪ್ರಭುರಾಜ ಹಾಜರಿದ್ದರು. ದತ್ತಾಂಶ ಮತ್ತು ನಕ್ಷೆಗಳ ಬಳಕೆಗಾಗಿ ಇದೇ ವೇಳೆ, ಕೆ-ಜಿಐಎಸ್ ಪೋರ್ಟಲ್ ಬಿಡುಗಡೆಗೊಳಿಸಲಾಯಿತು.
ದೂರ ಸಂವೇದಿ ಎಂದರೆ...
ದೂರ ಸಂವೇದಿ ಅನ್ವಯಿಕ ಕೇಂದ್ರವು ರಾಜ್ಯದ ಒಂದು ನೋಡಲ್ ಸಂಸ್ಥೆ. ರಾಜ್ಯದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಕುರಿತು ಸಂಶೋಧನೆಗಳ ಮೂಲಕ ನಾನಾ ಇಲಾಖೆಗಳಿಗೆ ನಿಖರವಾದ ಮಾಹಿತಿ ನೀಡುವ ಸರ್ಕಾರಿ ಅಂಗ. ನದಿ, ಅರಣ್ಯ, ಕೆರೆ, ಅದಿರು, ಅಂತರ್ಜಲ ಮಟ್ಟ, ಕೃಷಿ ಬಳಕೆ ಭೂಮಿ, ಕಾಪಿ ತೋಟ, ರಬ್ಬರ್ ಬೆಳೆ, ರೇಷ್ಮೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಮಾಹಿತಿಯನ್ನು ಉಪಗ್ರಹ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿದು, ನಕ್ಷೆಗಳ ಮೂಲಕ ಇಲಾಖೆಗಳಿಗೆ ಒದಗಿಸುತ್ತದೆ. ವಿಶೇಷವಾಗಿ ರಾಜ್ಯದಲ್ಲಿ ಅಂತರ್ಜಲ ಮಟ್ಟ, ನದಿಗಳಲ್ಲಿನ ನೀರಿನ ಗುಣಮಟ್ಟ, ಭೂಮಿಯ ಫಲವತ್ತತೆ ಮುಂತಾದ ಸಂಗತಿಗಳನ್ನು ಸಂಶೋಧನೆಗಳ ಮೂಲಕ ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡುತ್ತಿದೆ.ಇಲಾಖೆಗಳಿಗೆ ದತ್ತಾಂಶ ಮತ್ತು ನಕ್ಷೆಗಳನ್ನು ನಿಖರವಾಗಿ ನೀಡುವುದು ಈ ಸಂಸ್ಥೆಯ ವಿಶೇಷ. ವೈಜ್ಞಾನಿಕವಾಗಿ ಅಭಿವೃದ್ಧಿ ಸಾಧಿಸಲು ಈ ಸಂಸ್ಥೆ ನೀಡುವ ನಿಖರವಾದ ಮಾಹಿತಿಗಳು ಸರ್ಕಾರದ ಎಲ್ಲ ಇಲಾಖೆಗಳಿಗೂ ಉಪಯುಕ್ತವಾಗಿವೆ. ಈ ಕಾರಣದಿಂದಲೇ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಮೂಲಕ ಹಲವು ಯೋಜನೆಗಳಿಗೆ ಮಾರ್ಗದರ್ಶನ ನೀಡಲು ಈ ಕೇಂದ್ರವನ್ನು ರಾಜ್ಯದ ನೋಡಲ್ ಸಂಸ್ಥೆಯಾಗಿ ಗುರುತಿಸಲಾಗಿದೆ. ರಾಜ್ಯದಲ್ಲಿ 1986ರಿಂದಲೇ ತನ್ನ ಕಾರ್ಯಚಟುವಟಿಕೆ ಶುರುಮಾಡಿರುವ ಈ ಸಂಸ್ಥೆಯಲ್ಲಿ ಈಗ 150ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಸರ್ಕಾರದ ಅನುದಾನಿತ 100ಕ್ಕೂ ಹೆಚ್ಚು ಯೋಜನೆಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ. ತೀರಾ ಇತ್ತೀಚೆಗೆ ಅಂತರ್ಜಲ
ಮಟ್ಟ ಕಡಿಮೆಯಾಗಿ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಫ್ಲೋರೈಡ್ ಮಟ್ಟದ ಪ್ರಮಾಣ ಹೆಚ್ಚಾಗಿದ್ದನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
Advertisement