
ಬೆಂಗಳೂರು: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪ ಸರ್ಕಾರ್ ಅವರಿಗೆ ಹಿಂಬಡ್ತಿ ನೀಡಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವರ್ಗಾವಣೆಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ ವೇಳೆ ಔಷಧ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಆರೋಪದಲ್ಲಿ ಡಾ. ಪುಷ್ಪ ಸರ್ಕಾರ್ ಅವರನ್ನು ನಿರ್ದೇಶಕರ ಹುದ್ದೆಯಿಂದ ಹಿಂಬಡ್ತಿ ನೀಡಿ ಗುರುವಾರವಷ್ಟೇ (ಜೂ.11) ಸರ್ಕಾರ ಆದೇಶ ಹೊರಡಿಸಿತ್ತು. ವಿಚಾರಣೆ ನಡೆಸಿದ ನ್ಯಾ. ಆರ್.ಎಸ್.ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠ ಸರ್ಕಾರದ
ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಎಂ.ಎಸ್. ಭಾಗವತ್ ವಾದ ಮಂಡಿಸಿ, ರಾಜ್ಯ ಸರ್ಕಾರಕ್ಕೆ ಹಿಂಬಡ್ತಿ ನೀಡಿ ಆದೇಶ ಹೊರಡಿಸುವ ಅಧಿಕಾರವಿಲ್ಲ. ನಿಯಮದ ಪ್ರಕಾರ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಡಳಿತ ಸಮಿತಿಗೆ ಮಾತ್ರ ನಿರ್ದೇಶಕರ ಹುದ್ದೆಯಿಂದ ಕೆಳಗಿಳಿಸಲು ಅವಕಾಶವಿದೆ. ಆಡಳಿತ ಮಂಡಳಿ ಜಿಲ್ಲಾ ನ್ಯಾಯಾಧೀಶರ ಮಟ್ಟದ ತನಿಖಾಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಿದ ನಂತರ ಅಕ್ರಮ ಕಂಡುಬಂದರೆ ಮಾತ್ರ ಹುದ್ದೆಯಿಂದ ಹಿಂಬಡ್ತಿಗೊಳಿಸಬಹುದು. ಆದರೆ, ಸರ್ಕಾರ ಈ ಯಾವ ಕಾರ್ಯವನ್ನು ಮಾಡದೇ ನಿರ್ದೇಶಕರ ಹುದ್ದೆಯಿಂದ ಹಿಂಬಡ್ತಿ ನೀಡಿರುವ ಕ್ರಮ ಕಾನೂನುಬಾಹಿರವಾಗಿದ್ದು, ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ವಾದಿಸಿದರು.ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಪ್ರಕರಣವೇನು?: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಪುಷ್ಪ ಸರ್ಕಾರ್ ಅವರು ನಿರ್ದೇಶಕರಾಗಿದ್ದ ವೇಳೆ ಔಷಧಿ ಖರೀದಿಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಟಿ. ವೆಂಕಟೇಶ್ ಎಂಬುವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸರ್ಕಾರ ಪ್ರಾಥಮಿಕ ಹಂತದ ತನಿಖೆ ನಡೆಸಿ, ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದರು. ನಂತರ ಲೋಕಾಯುಕ್ತ ಇಲಾಖೆ ದೂರಿಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಲೋಕಾಯುಕ್ತದ ವರದಿ ಆಧಾರದ ಮೇಲೆ ಸರ್ಕಾರ ಮತ್ತೊಮ್ಮೆ ಆಂತರಿಕ ತನಿಖೆಗೆ ಆದೇಶಿಸಿ, ನಿರ್ದೇಶಕರ ಹುದ್ದೆಯಿಂದ ಹಿಂಬಡ್ತಿ ನೀಡಿ ಜೀವ ರಾಸಾಯನಿಕ ಶಾಸ್ತ್ರದ ಮುಖ್ಯಸ್ಥರಾಗಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಡಾ. ಪುಷ್ಪ ಸರ್ಕಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Advertisement