
ಬೆಂಗಳೂರು: ಸರಣಿ ಸರಗಳ್ಳತನ ಆರೋಪಿಗಳ ಬಂಧನಕ್ಕೆ ತೀವ್ರ ಪ್ರಯತ್ನ ನಡೆದಿದ್ದು, ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ಶುಕ್ರವಾರ
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ, ಗುರುವಾರ ನಗರದ ವಿವಿಧೆಡೆ ಸರಗಳ್ಳತನ ನಡೆಸಿರುವ ಗ್ಯಾಂಗ್‍ನ ಖಚಿತ ಮಾಹಿತಿ ಲಭ್ಯವಾಗಿದೆ. ರಾಜ್ಯ ಗುಪ್ತಚರ ಘಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯ ಪೊಲೀಸರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಕೇಂದ್ರಅಪರಾಧ ವಿಭಾಗ(ಸಿಸಿಬಿ) ಹಾಗೂ ನಗರ ಪೊಲೀಸರು ಪೊಲೀಸರ ಜಂಟಿಯಾಗಿ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳ ಬಂಧನದ ವಿಶ್ವಾಸವಿದೆ ಎಂದು ಹೇಳಿದರು.
ಸರಗಳ್ಳತನ ನಿಯಂತ್ರಣಕ್ಕೆ ನಗರದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಅದಕ್ಕಾಗಿ ಗುಣಮಟ್ಟದ ಕಾರ್ಯಾಚರಣೆ ಪ್ರಕ್ರಿಯೆ(ಎಸ್‍ಓಪಿ) ಪ್ರಕಾರ ನಾಕಾಬಂದಿ ರಚನೆ, ಹಾಗೂ ಗಸ್ತು ನಡೆಸುವಂತೆ ಸೂಚನೆ ನೀಡಲಾಗಿದೆ. ಸರಗಳ್ಳತನ ನಡೆಯುವ ಹಾಗೂ ನಡೆಯಬಹುದಾದ ಆಯಾಕಟ್ಟಿನ ಪ್ರದೇಶಗಳಲ್ಲಿ ವಿಶೇಷವಾಗಿ ಭದ್ರತೆ ಹೆಚ್ಚಳ ಹಾಗೂ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ ಎಂದು ರೆಡ್ಡಿ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಡಿಸಿಪಿಗಳು ಭಾಗವಹಿಸಿದ್ದರು.
ಒಂದೇ ಗ್ಯಾಂಗ್:
ಸರಗಳ್ಳತನ ಕೃತ್ಯದಲ್ಲಿ ಎರಡು ಮಾದರಿ ಇದೆ. ಮೊದಲನೇ ಮಾದರಿಗೆ ಉದಾಹರಣೆ ಸ್ಥಳೀಯ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕೆಲವರು ನಡೆಸುವ ವಿಧಾನ. ಇವರು ನಗರದ ಒಂದು ಅಥವಾ ಎರಡು ಕಡೆ ಕಾರ್ಯಾಚರಣೆ ನಡೆಸಿ ಪರಾರಿಯಾಗುತ್ತಾರೆ. ಮತ್ತೊಂದು ಮಾದರಿಯನ್ನು ಮಹಾರಾಷ್ಟ್ರದ ಮುಂಬೈ, ಪುಣೆ, ಕರ್ನಾಟಕದ ಬೆಳಗಾವಿಯ ಕೆಲ ತಂಡಗಳು ಅನುಸರಿಸುತ್ತವೆ.
ಇರಾನಿ ಗ್ಯಾಂಗ್ ಜೊತೆ ಆಗಮಿಸುವ ಈ ತಂಡಗಳು ಒಂದೇ ದಿನದಲ್ಲಿ ನಗರದ ಆಯಟ್ಟಿನ ಪ್ರದೇಶಗಳಲ್ಲಿ 5ರಿಂದ ಹತ್ತು ಕಡೆ ಸರ ಕಿತ್ತುಕೊಂಡು ಪರಾರಿಯಾಗುತ್ತವೆ. ಕೆಲವೊಮ್ಮೆ ಈ ಗ್ಯಾಂಗ್ ನಗರದಲ್ಲೇ ಬೀಡು ಬಿಟ್ಟಿರುತ್ತದೆ. ಎರಡನೇ ಮಾದರಿಯ ತಂಡವೇ ಗುರುವಾರ ನಗರದಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆದರೂ, ನಾವು ಎಲ್ಲಾ ಕೋನಗಳಲ್ಲೂ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು. ಸರಗಳ್ಳತನ ನಿಯಂತ್ರಣಕ್ಕೆ ಕ್ರಮಗಳು: ನಗರದಲ್ಲಿ ಸರಗಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ. ಸರಗಳ್ಳತನದ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
Advertisement