ಗಂಡಾನೆ ಜೀವ ಕಿತ್ತ ಹಲಸು

ಕಾಫಿ ತೋಟದಲ್ಲಿ ಘಮ್ ಎಂದು ಮೂಗಿಗೆ ಬಡಿಯುತ್ತಿದ್ದ ಹಲಸಿನ ಹಣ್ಣಿನ ವಾಸನೆ ಅರಿತ ಗಂಡಾನೆಯೊಮದು ಅದನ್ನು ತಿನ್ನುವ ಭರದಲ್ಲಿ ತನ್ನ ಜೀವವನ್ನೇ ಬಿಟ್ಟಿದೆ...
ವಿದ್ಯುತ್ ಸ್ಪರ್ಶಗೊಂಡು  ಅಸುನೀಗಿದ ಕಾಡಾನೆ
ವಿದ್ಯುತ್ ಸ್ಪರ್ಶಗೊಂಡು ಅಸುನೀಗಿದ ಕಾಡಾನೆ

ಆಲೂರು: ಕಾಫಿ  ತೋಟದಲ್ಲಿ ಘಮ್  ಎಂದು ಮೂಗಿಗೆ ಬಡಿಯುತ್ತಿದ್ದ ಹಲಸಿನ ಹಣ್ಣಿನ ವಾಸನೆ ಅರಿತ ಗಂಡಾನೆಯೊಮದು ಅದನ್ನು ತಿನ್ನುವ ಭರದಲ್ಲಿ ತನ್ನ ಜೀವವನ್ನೇ ಬಿಟ್ಟಿದೆ. ದೂರದಲ್ಲಿ ಕಂಡ ಹಣ್ಣನ್ನು ಸವಿಯುವ ಅವಸರದಲ್ಲಿ ಅದು ಸೊಂಡಿಲು ಮೇಲೆತ್ತಿದೆ. ಅಲ್ಲೇ ಇದ್ದ ವಿದ್ಯುತ್ ತಂತಿಗೆ ಸೊಂಡಿಲು ತಾಗಿ 27 ವರ್ಷದ ಆನೆ ಹಾಗೆಯೇ ನೆಲಕ್ಕುರುಳಿದೆ. ಈ ದುರಂತ ಘಟನೆ ನಡೆದಿದ್ದು, ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲಿನಲ್ಲಿ. ಅಲ್ಲಿದ್ದ ಐಬಿಸಿ ಕಂಪನಿಯ ಕಾಫಿ  ತೋಟದಲ್ಲಿ ಯಥೇಚ್ಚವಾಗಿ ಹಲಸಿನ ಹಣ್ಣುಗಳು ಬಿಟ್ಟಿದ್ದವು. ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಆನೆಯ ಮೂಗಿಗೆ ಹಲಸಿನ ಘಮ ಘಮ ವಾಸನೆ ಬಡಿದಿದೆ.ತಕ್ಷಣ ಕಾಫಿ ತೋಟದತ್ತ ನುಗ್ಗಿದೆ. ಅಲ್ಲದೆ, ಇದೇ ಮಾರ್ಗದಲ್ಲಿ ವಿದ್ಯುತ್ ತಂತಿ ಮಾರ್ಗವೂ ಇದ್ದು, ಹಲವು ತಿಂಗಳಿಂದ ತಂತಿಗಳು ಜೋತುಬಿದ್ದಿದ್ದವು. ಈ ತಂತಿ ಆನೆಯ ಸೊಂಡಿಲಿಗೆ ತಾಕಿದ ಪರಿಣಾಮ ಅದು ಅಲ್ಲಿಯೇ ಪ್ರಾಣ ಬಿಟ್ಟಿದೆ.

ಜನರಿಂದಲೇ ಕೇಸ್: ಈ ಹಿಂದೆಯೂ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸ್ಪರ್ಶಗೊಂಡು ಹಲವಾರು ಕಾಡಾನೆಗಳು ಅಸುನೀಗಿವೆ. ಈ ತಂತಿಗಳು ತೀರಾ ಕೆಳಹಂತದಲ್ಲಿದ್ದರೂ ಅವುಗಳನ್ನು ಸರಿಪಡಿಸುವ ಗೋಜಿಗೆ ಸೆಸ್ಕ್ ಇಲಾಖೆ ಹೋಗಿಲ್ಲ. ಈ ನಿರ್ಲಕ್ಷ್ಯದ ಬಗ್ಗೆ ಮೊಕದ್ದಮೆ ದಾಖಲಿಸ ಬೇಕು. ಇಲ್ಲದಿದ್ದರೆ ಸಾರ್ವಜನಿಕರೇ ಕಂಪನಿ, ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಇನ್ನೊಂದು ವಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಮಾಹಿತಿ ನೀಡದಿದ್ದರೆ, ಬೈರಾಪುರದಲ್ಲಿರುವ ಅರಣ್ಯ ಇಲಾಖೆ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಈ ಭಾಗದ ಜನರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com