ಹಿಂದುಳಿದ ವರ್ಗದ ಶಿಕ್ಷಣ ಸಂಸ್ಥೆಗಳಿಗೆ ನೆರವು: ಸಿದ್ದರಾಮಯ್ಯ

ಹಿಂದುಳಿದ ವರ್ಗದವರು ಸ್ಥಾಪಿಸುವ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರದಿಂದ ಅಗತ್ಯ ಭೂಮಿ ಜತೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ...
ಮಾಗಡಿ ಬಳಿಯ ಸೋಲೂರಿನಲ್ಲಿ ಆರ್.ಎಲ್.ಜಾಲಪ್ಪ ಅಕಾಡೆಮಿ ಸ್ಥಾಪನಾ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
ಮಾಗಡಿ ಬಳಿಯ ಸೋಲೂರಿನಲ್ಲಿ ಆರ್.ಎಲ್.ಜಾಲಪ್ಪ ಅಕಾಡೆಮಿ ಸ್ಥಾಪನಾ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ರಾಮನಗರ: ಹಿಂದುಳಿದ ವರ್ಗದವರು ಸ್ಥಾಪಿಸುವ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರದಿಂದ ಅಗತ್ಯ ಭೂಮಿ ಜತೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಾಗಡಿ ತಾಲೂಕಿನ ಸೋಲೂರಿನಲ್ಲಿ ಭಾನುವಾರ ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವ ಆರ್.ಎಲ್.ಜಾಲಪ್ಪ ಅಕಾಡೆಮಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾgಣ , ಶಿಕ್ಷಣ, ಸೇರಿದಂದೆ ಎಲ್ಲ ನಿರ್ಣಾಯಕ ಕ್ಷೇತ್ರಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾದಾಗಷ್ಟೇ ಸಮಾಜದ ಪರಿವರ್ತನೆ ಸಾಧ್ಯ. ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಸಂಪೂರ್ಣ ನೆರವು ಒದಗಿಸಲಾಗುವುದು ಎಂದರು. ಸಂವಿಧಾನದಲ್ಲಿ ಮೀಸಲು ಒದಗಿಸಿದ್ದರೂ ಸಾಕಷ್ಟು ಕ್ಷೇತ್ರಗಳಲ್ಲಿ ಅರ್ಹರಿಗೆ ಸೌಲಭ್ಯ ದೊರೆತಿಲ್ಲ. ಸರ್ವರಿಗೂ ಸಮಪಾಲು, ಜಾತ್ಯತೀತ ರಾಷ್ಟ್ರ ನಿರ್ಮಾಣದಂತಹ ಘೋಷಣೆಗಳಿಂದ ಏನೂ ಸಾಧ್ಯವಾಗದು. ಅದಕ್ಕೆ ಪೂರಕ ಕಾರ್ಯಕ್ರಮಗಳ ಅನುಷ್ಠಾನ ಅಗತ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಬಸವ ಶರಣಾದಿಗಳು ಸಮಾನತೆಯನ್ನು ಸಾರಿದರಾದರೂ ಪೂರಕ ಕಾರ್ಯಕ್ರಮಗಳಿಲ್ಲದೆ ಫಲಪ್ರದವಾಗಲಿಲ್ಲ. ಅವಕಾಶಗಳು ಕೆಲವೇ ಜಾತಿ ಮತ್ತು ವರ್ಗಕ್ಕೆ ದೊರೆತು, ಬಹು ಸಂಖ್ಯಾತರು ನಿರಂತರವಾಗಿ ವಂಚಿತರಾಗುತ್ತಿರುವಾಗ ಬದಲಾವಣೆ ಕಾಣುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕಿತ್ತು ತಿನ್ನುವ ಬಡತನ, ಪೂರಕ ವಾತಾವರಣ ಇಲ್ಲದಿರುವುದು, ತರಬೇತಿ ಕೊರತೆಯಿಂದಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಸಮಾಜಕ್ಕೆ ಅವಕಾಶ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿಯುವುದರಿಂದ ಏನೂ ಪ್ರಯೋಜನವಿಲ್ಲ. ಇಚ್ಛಾಶಕ್ತಿ ತೋರುವುದು ಮುಖ್ಯ. ಹಿಂದುಳಿದ ವರ್ಗಗಳ ಅಭ್ಯರ್ಧಿಗಳಿಗೆ ಅವಕಾಶಗಳನ್ನು ಒದಗಿಸಲು ಮುಂದಾಗುವ ಸಂಸ್ಥೆಗಳಿಗೆ ಶಕ್ತಿ ಮತ್ತು ಸಾಮರ್ಥ್ಯ ತುಂಬಲು ತಾವು ಬದ್ಧ ಎಂದು ಅವರು ಭರವಸೆ ನೀಡಿದರು.

ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಉತ್ತಮ ಶಿಕ್ಷಣ, ಸೂಕ್ತ ಅವಕಾಶಗಳು ಲಭಿಸಿದರೆ ಎಂಥವರೂ ಮೇಧಾವಿಗಳಾಗಲು ಸಾಧ್ಯವಿದೆ. ಅಂತಹ ವಾತಾವರಣವನ್ನು ನಾವು ನಿರ್ಮಿಸಿಕೊಟ್ಟರೆ ಶೋಷಿತ ಸಮುದಾಯದ ಮಕ್ಕಳೂ ಪೈಪೋಟಿಗೆ ನಿಲ್ಲುವರು ಎಂದು ಸಿದ್ದರಾಮಯ್ಯ ತಿಳಿಸಿದರು.  ಇಂತಹ ತರಬೇತಿ ಕೇಂದ್ರಗಳಲ್ಲಿ ನೆರವು ಪಡೆದು, ಉನ್ನತ ಹುದ್ದೆಗೇರಿದವರು ತಾವು ಬಂದ ಸಮುದಾಯದ ಜತೆಗೆ ಸಮಾಜಕ್ಕೆ ಕೊಡುಗೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಯಾವುದೇ ಕಾರಣಕ್ಕೂ ಸ್ವಾರ್ಥ ಚಿಂತನೆಗೆ ಬಲಿಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು. ಕೇಂದ್ರದ ಮಾಜಿ ಸಚಿವ ಮತ್ತು ದೇವರಾಜ ಅರಸು ಎಜುಕೇಷನಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ಎಲ್.ಜಾಲಪ್ಪ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com