
ಸೂಲಿಬೆಲೆ: ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕರ್ತವ್ಯ ನಿರ್ವಹಿಸುವ ನರ್ಸ್‍ಗಳೇ
ರೋಗಿಗಳ ಪಾಲಿಗೆ ತಾತ್ಕಾಲಿಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಯಿ ಕಾರ್ಡು, ಜನನಿ ಸುರಕ್ಷೆಯಂತ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ದಾಖಲೆಗಳಿಗೆ ವೈದ್ಯರ ಸಹಿ ಇಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ವೈದ್ಯರಿಲ್ಲದ
ಪರಿಣಾಮ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ಹೊಸಕೋಟೆ ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಸೂಲಿಬೆಲೆಯಲ್ಲಿ ಆರು ಹಾಸಿಗೆಗಳನ್ನು ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಇಲ್ಲಿ ನಿತ್ಯ 100 ರಿಂದ 150 ಮಂದಿ ರೋಗಿಗಳು ಚಿಕಿತ್ಸೆಗಾಗಿ ನಾನಾ ಕಡೆಯಿಂದ ಬರುತ್ತಾರೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 32 ಹಳ್ಳಿಗಳು ಒಳಪಟ್ಟಿದ್ದು, 35378 ಜನಸಂಖ್ಯೆ ಹೊಂದಿದೆ. ಈ ಆಸ್ಪತ್ರೆ ವ್ಯಾಪ್ತಿಯಲ್ಲಿ 7385 ಕುಟುಂಬಗಳಿವೆ. 5 ಗ್ರಾ.ಪಂಗಳನ್ನು ಒಳಗೊಂಡಿದೆ. ಇಷ್ಟು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ವೈದ್ಯರಿಲ್ಲ. ಕಳೆದ ಒಂದು ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವೈದ್ಯರು ತಮ್ಮ ಗುತ್ತಿಗೆ ಅವಧಿ ಮುಗಿದ ಕಾರಣ ಮೇ 30ರಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. 24 ಗಂಟೆ ಹೆರಿಗೆ ಸೌಲಭ್ಯ ಇರುವ ಕೇಂದ್ರದಲ್ಲಿ ಎನ್‍ಆರ್‍ಹೆಚ್‍ಎಂ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನರ್ಸ್‍ಗಳೇ ಆಸ್ಪತ್ರೆಗೆ ಬರುವ ರೋಗಿಗಳನ್ನು ನಿಭಾಯಿಸುವಂತಾಗಿದೆ.
Advertisement