ಎಂಆರ್ ಪಿಎಲ್ ಸಲ್ಫರ್- ಕೋಕ್ ಘಟಕ ಪರವಾನಗಿ ನವೀಕರಿಸದಂತೆ ಆಗ್ರಹ

ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮದಲ್ಲಿ ಎಂಆರ್ ಪಿಎಲ್ ಸಲ್ಫರ್- ಕೋಕ್ ಕಂಪನಿಯ ಪರವಾನಗಿಯನ್ನು ನವೀಕರಿಸಬಾರದು ಎಂದು...
ಎಂಆರ್ ಪಿಎಲ್ ಸಲ್ಫರ್- ಕೋಕ್ ಘಟಕ ಪರವಾನಗಿ ನವೀಕರಿಸದಂತೆ ಆಗ್ರಹ

ಬೆಂಗಳೂರು: ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮದಲ್ಲಿ ಎಂಆರ್ ಪಿಎಲ್ ಸಲ್ಫರ್- ಕೋಕ್ ಕಂಪನಿಯ ಪರವಾನಗಿಯನ್ನು ನವೀಕರಿಸಬಾರದು ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ.

ಎಂ.ಆರ್.ಪಿ.ಎಲ್  ಸಲ್ಫರ್  ಹಾಗೂ  ಕೋಕ್ ಘಟಕ ಜೋಕಟ್ಟೆ  ಗ್ರಾಮದ ಜನರ ಬದುಕನ್ನು  ಹೈರಾಣಗೊಳಿಸಿದೆ. ಮಿತಿಮೀರಿದ ಶಬ್ಧ ಮಾಲಿನ್ಯ, ಸಲ್ಫರ್ ನ ಕೆಟ್ಟ ವಾಸನೆ ಹಾಗೂ ಮಾಲಿನ್ಯ, ರಾಸಾಯನಿಕಯುಕ್ತ ನೀರಿನಿಂದ ಇಲ್ಲಿನ ಜನ ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಆದರೆ ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಸಮಿತಿಯ ಪದಾಧಿಕಾರಿಗಳಾದ ಮುನೀರ್ ಕಾಟಿಪಳ್ಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಂ.ಆರ್.ಪಿ.ಎಲ್  ಸಲ್ಫರ್  ಹಾಗೂ  ಕೋಕ್ ಘಟಕದಿಂದಾಗಿ ಅಂತರ್ಜಾಲ ನೀರು ಕೂಡ ಕಲುಷಿತವಾಗಿದ್ದು, ಇಲ್ಲಿನ ವಾಸಿಗಳು ಚರ್ಮರೋಗ ಸೇರಿದಂತೆ ಇತರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಓರ್ವ ಮಹಿಳೆಯು ಕೂಡ ಸಾವನ್ನಪ್ಪಿದ್ದಾರೆ. ಕಂಪನಿಯ ಮಾಲಿನ್ಯದ ಬಗ್ಗೆ ಸಚಿವ ಅಭಯಚಂದ್ರ ಜೈನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಆರೋಗ್ಯ ಸಚಿವ ಯು.ಟಿ ಖಾದರ್, ಅರಣ್ಯ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಇದನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಮನೆ, ಶಾಲೆ, ಮಸೀದಿ ಮಂದಿರದಲ್ಲಿ ಕೋಕ್ ನ ಪೌಡರ್ ಹಾರಾಡುತ್ತಿರುತ್ತವೆ. ಕಂಪನಿಯಿಂದ ಸೋರಿಯಾಗುತ್ತಿರುವ ಬೆಂಝಿನ್ ನೇರವಾಗಿ ಕ್ಯಾನ್ಸರ್ ನಂತರ ಮಾರಕ ಖಾಯಿಲೆಗಳಿಗೆ ಕಾರಣವಾಗುತ್ತಿದೆ.  ಆದ್ದರಿಂದ ಮೂರನೇ ಹಂತದ ಘಟಕವನ್ನು ಸ್ಥಗಿತಗೊಳಿಸಬೇಕು ಹಾಗೂ ಅದರ ನವೀಕರಣಕ್ಕೆ ಅನುಮತಿ ನೀಡಬಾರದು. ಜೂನ್ 30ಕ್ಕೆ ಕಂಪನಿಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಪರವಾನಗಿ ಅವಧಿ ಮುಗಿಯುತ್ತಿದ್ದು, ಇದನ್ನು ನವೀಕರಣಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com