ಕೋರ್ಟ್ ಕಲಾಪದಿಂದ ಹೊರಗುಳಿದು ಪ್ರತಿಭಟನೆ
ಬೆಂಗಳೂರು: ಅಧೀನ ನ್ಯಾಯಾಲಯದಲ್ಲಿ ಬಾಕಿ ಇರುವ ನ್ಯಾಯಧೀಶರ ಹುದ್ದೆ ಶೀಘ್ರ ಭರ್ತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಇದೇ ಜೂ.19ರಂದು ಬೆಂಗಳೂರು ವಕೀಲರ ಸಂಘ ಕೋರ್ಟ್ ಕಲಾಪ ದಿಂದ ಹೊರಗುಳಿಯುವುದಾಗಿ ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿ ನನಡೆಸಿ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್‍ನಲ್ಲಿಯೂ ಸಹ 27 ನ್ಯಾಮೂರ್ತಿಗಳ ಹುದ್ದೆ ಭರ್ತಿ ಮಾಡ ಬೇಕಿದೆ. ನ್ಯಾಯಮೂರ್ತಿಗಳ ನೇಮಕ ಆಗದ ಪರಿಣಾಮ ಅರ್ಜಿ ವಿಲೇವಾರಿ ಯಲ್ಲಿ ವಿಳಂಬ ಆಗುತ್ತಿರುವುದಾಗಿ ಅವರು ತಿಳಿಸಿದರು. ಪೊಲೀಸರು, ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಘರ್ಷದ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಸಿಬಿಐ ವಿಚಾರಣೆಗೆ ರಾಜ್ಯ ಸಚಿವ ಸಂಪುಟ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಆದ್ದರಿಂದ ಅಂದು ಸರ್ಕಾರದ ಕ್ರಮ ಖಂಡಿಸಿ ಬೆಂಗಳೂರು ನಗರದ ಸಿವಿಲ್,ಮ್ಯಾಜಿಸ್ಟರೇಟ್, ಮೇಯೋಹಾಲ್ ಹಾಗೂ ಹೈಕೋರ್ಟ್‍ನ ವಕೀಲರು ಶಾಂತಿಯುತವಾಗಿ ಕೆ.ಆರ್. ವೃತ್ತದಿಂದ ರಾಜಭವನದವರೆಗೂ ಬೃಹತ್ ಮೆರವಣಿಗೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ನೀಡಲಾಗುವುದಾಗಿ ಅವರು ಹೇಳಿದರು. ಜಿಲ್ಲಾ„ಕಾರಿಗಳಿಗೆ ಮನವಿ ಸಲ್ಲಿಸಿ: ಸರ್ಕಾರ ತಮ್ಮ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಏಕಪಕ್ಷೀಯ
ವಾಗಿ ಈ ತೀರ್ಮಾನ ತೆಗೆದುಕೊಂಡಿದೆ.ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ರಾಜ್ಯದಲ್ಲಿನ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿನ 189 ವಕೀಲರಸಂಘಗಳು ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡುವ ಮೂಲಕ ಬೆಂಗಳೂರು ವಕೀಲರ ಸಂಘಕ್ಕೆ ಬೆಂಬಲ ಸೂಚಿಸಬೇಕು ಎಂದು ಇದೇ ವೇಳೆ ಅವರು ಕರೆ ನೀಡಿದರು.
ರಾಜ್ಯ ಹೈಕೋರ್ಟ್‍ನಲ್ಲಿ 27 ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಆಗಬೇಕಿದೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದ(ಎನ್‍ಜೆಎಸಿ) ಪ್ರಶ್ನಿಸಿ ದಾಖಲಾಗಿರುವ ಅರ್ಜಿ ಸುಪ್ರೀಂ ಕೋರ್ಟ್‍ನಲ್ಲಿ ಇನ್ನೂ ಬಾಕಿ ಇದೆ. ಈ ಕಾರಣಕ್ಕೆ ನ್ಯಾಯಾಂಗದಲ್ಲಿ ನ್ಯಾಯಮೂರ್ತಿಗಳ ನೇಮಕ ಮಾಡದಿರುವುದು ಸರಿಯಲ್ಲ. ಅರ್ಜಿ ಇತ್ಯರ್ಥ ಆಗುವವರೆಗೂ ಈ ಹಿಂದೆ ಇದ್ದ ಕೊಲಿಜಿಯಂ ವ್ಯವಸ್ಥೆ ಮೂಲಕ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು.
- ಎಚ್.ಸಿ. ಶಿವರಾಮು, ಬೆಂಗಳೂರು ವಕೀಲ ಸಂಘದ ಅಧ್ಯಕ್ಷ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ