
ಬೆಂಗಳೂರು: ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಎಂಎಸ್‍ಜಿ ಪ್ರಮಾಣದ ಬಗ್ಗೆ ಕೆಲವು ಗೊಂದಲವಿದ್ದು, ಕೇಂದ್ರ ಸರ್ಕಾರ ಕಾನೂನು ತೊಡಕನ್ನು ನಿವಾರಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಎಂಎಸ್‍ಜಿ (ಮೋನೋಸೋಡಿಯಂ ಗುಲ್ಟಾಮೇಟ್) ಪ್ರಮಾಣದ ಮೇಲೆ ಕಡಿವಾಣ ಹೇರುವ ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಕೆಲವು
ಗೊಂದಲವಿದ್ದು, ರಾಜ್ಯ ಸರ್ಕಾರಕ್ಕೆ ಇಂತಹ ಆಹಾರ ಉತ್ಪನ್ನಗಳ ಮೇಲೆ ಕ್ರಮ ವಹಿಸಲು ಕಷ್ಟವಾಗುತ್ತಿದೆ. ಎಂಎಸ್‍ಜಿಯನ್ನು ಸಂಸ್ಥೆಯವರೇ ಆಹಾರ ಉತ್ಪನ್ನಕ್ಕೆ ಹಾಕಿದರೆ ಆಹಾರ ಇಲಾಖೆಗೆ ಈ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಆದರೆ ಆಹಾರ ಉತ್ಪನ್ನಗಳನ್ನು ತಯಾರಿಸುವಾಗ ನೀರು ಸೇರಿದಂತೆ ಕಚ್ಛಾವಸ್ತುಗಳ ಮೂಲಕವೂ ಎಂಎಸ್‍ಜಿ ಅಂಶ ಉತ್ಪನ್ನಕ್ಕೆ ಸೇರ್ಪಡೆಯಾಗುತ್ತದೆ.
ತಯಾರಿಕಾ ಸಂಸ್ಥೆಗಳಿಗೆ ತಿಳಿಯದಂತೆ ಕಚ್ಛಾವಸ್ತುಗಳ ಮೂಲಕ ಎಂಎಸ್‍ಜಿ ಸೇರ್ಪಡೆಯಾದರೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾಯ್ದೆಯಲ್ಲಿ ಮಾಹಿತಿಯಿಲ್ಲ. ಕೇಂದ್ರ ಸರ್ಕಾರವೇ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಎಂದರು.
ಮ್ಯಾಗಿಯನ್ನು ಪರೀಕ್ಷಿಸಿದಂತೆ ಇತರೆ 7 ಕಂಪನಿಗಳ ನೂಡಲ್ಸ್ ಉತ್ಪನ್ನಗಳನ್ನು ಪ್ರಯೋಗಾಲಯಕ್ಕೆ ನೀಡಲಾಗಿದೆ. ಆಹಾರ ಉತ್ಪನ್ನಗಳನ್ನು ಪರೀಕ್ಷಿಸಲು ಇರುವ ನಿಯಮದಂತೆ 7 ಕಂಪನಿಗಳ ನೂಡಲ್ಸ್ ಉತ್ಪನ್ನಗಳನ್ನು ಪಶ್ಚಿಮ ಬಂಗಾಳದ ಪ್ರಯೋಗಾಲಯಕ್ಕೆ ನೀಡಲಾಗಿದೆ. ಶೀಘ್ರದಲ್ಲಿ ವರದಿ ಸರ್ಕಾರಕ್ಕೆ ಬರಲಿದ್ದು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement