
ಬೆಂಗಳೂರು: ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಹಳೇ ಅಪರಾಧಿಗಳು, ಜಾಮೀನಿನ ಮೇಲೆ ಬಿಡುಗಡೆಯಾಗಿರುವರು, ಜೈಲಿನಲ್ಲಿರುವವರು ಹೀಗೆ ಸರಗಳ್ಳತನಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದರು.
ನಗರ ಪೊಲೀಸರಿಗೆ ಸವಾಲಾಗಿರುವ ಸರಗಳ್ಳತನ ನಿಯಂತ್ರಣ ಹಾಗೂ ಇತ್ತೀಚೆಗೆ ನಗರದಲ್ಲಿ ಸಂಭವಿಸಿರುವ ಸರಗಳ್ಳತನ ಪ್ರಕರಣಗಳ ಪತ್ತೆ ಮಾಡುವುದು ಮೊದಲ ಆದ್ಯತೆಯಾಗಿದೆ. ಹೀಗಾಗಿ, ಸರಗಳ್ಳತನ ಸಂಬಂಧಿಸಿದ ಹಾಗೂ ನ್ಯಾಯಾಲಯದಿಂದ ವಾರೆಂಟ್ ಆಗಿರುವ ಆರೋಪಿಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಬೇಕು. ಸರಗಳ್ಳರ ಬಂಧನಕ್ಕೆ ತೀವ್ರ ಕಾರ್ಯಾಚರಣೆ ನಡೆಸಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಕರೆ ನೀಡಿದರು.
ಸಿಕ್ಕಿಬಿದ್ದವ ಸರಗಳ್ಳನಲ್ಲ: ಮಂಗಳವಾರ (ಜೂ.16) ಸಂಜೆ ಎಚ್‍ಎಸ್‍ಆರ್ ಬಡಾವಣೆ ಗಣೇಶ ಪಾರ್ಕ್ ಬಳಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪದ ಮೇಲೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಶಂಕಿತ ವ್ಯಕ್ತಿ ಸರಗಳ್ಳ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಉದ್ಯಾನದ ಬಳಿ ಮಹಿಳೆ ಶೈಲಜಾ ಎಂಬುವರು ಸರವನ್ನು ಬೈಕ್‍ನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದರು. ಆರೋಪಿಗಳು ಪರಾರಿಯಾದ ಬಳಿಕ ಅದೇ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ವಿಚಾರಣೆಯಲ್ಲಿ ಆತ ಸರಗಳ್ಳ ಅಲ್ಲ ಎನ್ನುವುದು ತಿಳಿದು ಬಂದಿದೆ. ಆದರೂ, ಆತನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಎಚ್‍ಎಸ್‍ಆರ್ ಬಡಾವಣೆ ಪೊಲೀಸರು ತಿಳಿಸಿದ್ದಾರೆ.
Advertisement