ಜಯಚಾಮರಾಜ ಒಡೆಯರ್ ಅವರದ್ದು ಅಸಹಜ ಸಾವು: ಪ್ರೊ.ನಂಜರಾಜ ಅರಸ್

ಅಂದಿನ ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದರೆ ಅದು ಅಸಹಜ ಸಾವು ಎಂಬುದು ಗೊತ್ತಾಗುತ್ತಿತ್ತು ಎನ್ನುವ ಮೂಲಕ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ...
ಜಯಚಾಮರಾಜ ಒಡೆಯರ್
ಜಯಚಾಮರಾಜ ಒಡೆಯರ್

ಮೈಸೂರು: ಅಂದಿನ ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದರೆ ಅದು ಅಸಹಜ ಸಾವು ಎಂಬುದು ಗೊತ್ತಾಗುತ್ತಿತ್ತು ಎನ್ನುವ ಮೂಲಕ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಗುರುವಾರ ಮೈಸೂರಿನ ಮೈವಿವಿ ಡಾ.ಬಿ. ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದಲ್ಲಿ ನಡೆದ `ಜನತಂತ್ರ ವ್ಯವಸ್ಥೆ ಮತ್ತು ರಾಜಸತ್ತೆಯ ಅವಶೇಷಗಳು' ಕುರಿತ ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು, ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಮೈಸೂರು ಸಂಸ್ಥಾನ ವಿಲೀನವಾದ ನಂತರ ಒಡೆಯರ್ ಕೈ ಬರಿದಾಯಿತು. ಕೊನೆಕೊನೆಗೆ ಸ್ಟೇಟಸ್ ಮೇಂಟೇನ್ ಮಾಡಲು ಹಣವಿಲ್ಲದಿದ್ದಾಗ ಬೇಸತ್ತಿದ್ದರು. ಆದ್ದರಿಂದಲೇ ಅರಮನೆಯನ್ನು ಸರ್ಕಾರವೇ ವಹಿಸಿಕೊಳ್ಳಲಿ ಎಂದು ಪತ್ರ ಬರೆದಿದ್ದರು.

ಇದನ್ನು ಧಿಕ್ಕರಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಂದೆಯ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಆ ಪ್ರಕರಣದ ಪ್ರಥಮ ವಿಚಾರಣೆಗೂ ಹಿಂದಿನ ದಿನ ಜಯಚಾಮರಾಜ ಒಡೆಯರ್ ವಿಧಿವಶರಾದರು. ಆಗ ಅವರ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ರು.5000 ಇರಲಿಲ್ಲ. ಅಂತ್ಯಕ್ರಿಯೆ ಮಾಡಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮುಂದೆ ಬರಲಿಲ್ಲ. ಅಂದು ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಸರ್ಕಾರದ ವೆಚ್ಚದಲ್ಲಿ ಅಂತ್ಯಕ್ರಿಯೆ ನಿರ್ವಹಿಸಿದರು. ಆದರೆ ಮರಣೋತ್ತರ ಪರೀಕ್ಷೆ ಮಾತ್ರ ನಡೆಯಲಿಲ್ಲ. ನಡೆದಿದ್ದರೆ ಅಸಹಜ ಸಾವು ಎಂಬುದು ಗೊತ್ತಾಗುತ್ತಿತ್ತು ಎಂದು ಅವರು ಹೇಳಿದರು.

ಶ್ರೀಕಂಠದತ್ತ ಬೈದಿದ್ದು ಯಾರಿಗೆ?
ಇತ್ತೀಚೆಗೆ ನಡೆದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕದಲ್ಲಿ ಮಾಡಿ ಪ್ರಧಾನಿಯೂ ಸೇರಿದಂತೆ ಮೂರು ಜನ ಮಂತ್ರಿ ಮಹಾಶಯರು, ಶಾಸಕರು ಭಾಗವಹಿಸಿದ್ದರು. ಅವರಲ್ಲಿ ಒಬ್ಬ ಸಚಿವ ಹಾಗೂ ಹೊಸದಾಗಿ ಗೆದ್ದ ಶಾಸಕರೊಬ್ಬರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕೈಯಲ್ಲಿ ಬೇಸಿಕೊಂಡಿದ್ದರು. ಸಚಿವ ಅರಮನೆಗೆ ಸೇರಿದ ಜಾಗವನ್ನು ತಮ್ಮ ಭಾಮೈದನಿಗೆ ಕೊಡಿ ಎಂದು ಬೇಸಿಕೊಂಡಿದ್ದರೆ, ಈ ಶಾಸಕ ಸಂಸ್ಥೆ ಕಟ್ಟಬೇಕು ಎಂದು ಜಾಗ ಕೊಡಿ ಎಂದಿದ್ದರು. ಇಬ್ಬರಿಗೂ ಒಡೆಯರ್ ಬೈದು ಅರಮನೆಗೆ ಬಾರದಂತೆ ತಾಕೀತು ಮಾಡಿದ್ದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತೀರಿಕೊಂಡ ಬಳಿಕ ಅವರು ಅರಮನೆಗೆ ಬಂದಿದ್ದಾರೆ. ಪ್ರಮೋದಾದೇವಿ ಒಡಯರ್ ತಾವು ಕಣ್ಣೀರು ಹಾಕಿದರೆ ಸಿದ್ದರಾಮಯ್ಯ ಸರ್ಕಾರ ಬೀಳುತ್ತದೆ ಎಂಬ ಭ್ರಮೆಯಲ್ಲಿದ್ದರು. ಅದು ಫಲಿಸಲಿಲ್ಲ. ತನ್ನ ಪತಿ ನಿರ್ವಹಿಸುತ್ತಿದ್ದ ಕಾನೂನು ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ಇಚ್ಛೆ ತೋರಿದಾಗ ಜಾಗ ಕೇಳಿದ್ದ ಶಾಸಕರೇ ಮಧ್ಯಸ್ಥಿಕೆವಹಿಸಲು ಬಂದಿದ್ದಾರೆ. ಈ ಮಾತುಗಳನ್ನು ನಾನು ಹೇಳಬಾರದು ಎಂದುಕೊಂಡರೂ ಸತ್ಯ ಮುಚ್ಚಿಡಬಾರದು ಎಂಬ ಕಾರಣಕ್ಕೆ ಹೇಳುತ್ತಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com