
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಾರ್ವಜನಿಕ ಚರ್ಚೆಯ ಬೆನ್ನಲ್ಲೇ ಸರ್ಕಾರ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ ಪರಿಶೀಲನೆಗೆ ಮುಂದಾಗಿದೆ.
ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸೂಕ್ಷ್ಮ ತಿದ್ದುಪಡಿ ತರಲು ನಿರ್ಧರಿಸಿದೆ. ಇದರನ್ವಯ ಇನ್ನು ಮುಂದೆ ಪ್ರತಿ ವರ್ಷ ಅಕ್ಟೋಬರ್ 31ರೊಳಗಾಗಿ ಸಂಸ್ಥೆಯ ಕಾರ್ಯವೈಖರಿ ವರದಿಯನ್ನು ಲೋಕಾಯುಕ್ತರು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯಾವ ಸಂಸ್ಥೆ ಸರ್ಕಾರದಿಂದ ಹಣಕಾಸು ಸಹಾಯ ಪಡೆಯುತ್ತದೋ, ಅದು ತನ್ನ ಕಾರ್ಯನಿರ್ವಹಣಾ ವರದಿಯನ್ನು ಸರ್ಕಾರಕ್ಕೆ ನೀಡಲೇ ಬೇಕು. ಲೋಕಾಯುಕ್ತ ಸಂಸ್ಥೆ ಇದುವರೆಗೆ ವರದಿ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ, ಪ್ರತಿ ವರ್ಷ ಅ. 31ರೊಳಗೆ ವರದಿ ನೀಡುವಂತೆ ಕಾನೂನು ತಿದ್ದುಪಡಿ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಸಚಿವ ಜಯಚಂದ್ರ ಹೇಳಿದ್ದಾರೆ.
ಸ್ವಾಯತ್ತತೆಗೆ ಧಕ್ಕೆ ಇಲ್ಲ:
ತಿದ್ದುಪಡಿಯಿಂದ ಸ್ವಾಯತ್ತತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಶಾಸನಬದ್ಧ ಸಂಸ್ಥೆಯಾದರೂ ವಾರ್ಷಿಕ ಸಾಧನಾ ವರದಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಾಮಾನ್ಯ ಮನುಷ್ಯನಿಗೂ ಆ ಸಂಸ್ಥೆಯಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಬೇಕು. ಹೀಗಾಗಿ ಸರ್ಕಾರ ಈ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಿದ್ದಾರೆ.
ವಿಭಿನ್ನ ಅಭಿಪ್ರಾಯ
ಸರ್ಕಾರದ ಈ ಕ್ರಮದ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ತಿದ್ದುಪಡಿಗೆ ಮುಂದಾಗಿರುವುದರಲ್ಲಿ ಯಾವ ತಪ್ಪೂ ಇಲ್ಲ ಎಂದಿದ್ದಾರೆ. ಆದರೆ ನ್ಯಾ. ಶಿವರಾಜ್‍ಪಾಟೀಲ್, ಶಾಸನ ಸಭೆ ತೆಗೆದುಕೊಳ್ಳುವ ನಿರ್ಧಾರದಿಂದ ಲೋಕಾಯುಕ್ತ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ಬರಬಾರದು ಎಂದಿದ್ದಾರೆ.
ನನ್ನ ನೆನಪಿನ ಶಕ್ತಿಯ ಪ್ರಕಾರ ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ತನ್ನ ಕಾರ್ಯನಿರ್ವಹಣಾ ವರದಿ ನೀಡಬೇಕೆಂಬ ನಿಯಮ ಇದೆ. ರಾಜ್ಯಪಾಲ ಎಂದರೆ ಸರ್ಕಾರ. ಈಗ ಸರ್ಕಾರಕ್ಕೂ ವರದಿ ನೀಡಬೇಕು ಎಂಬ ತಿದ್ದುಪಡಿ ತರಲು ನಿರ್ಧರಿಸಿದರೆ ಯಾವ ತಪ್ಪೂ ಇಲ್ಲ. ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಈ ಹಿನ್ನೆಲೆಯಲ್ಲೂ ಸರ್ಕಾರ ತಿದ್ದುಪಡಿ ತಂದಿರಬಹುದು. ವರದಿ ನೀಡಿ ಎಂದು ಸರ್ಕಾರ ಕೇಳುವುದರಿಂದ ಇನ್ನಷ್ಟು ಉತ್ತರದಾಯಿತ್ವ ಬರುತ್ತದೆ.
-ನ್ಯಾ. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ
Advertisement