ಅನ್ನಭಾಗ್ಯ ಯೋಜನೆ ಟೀಕಿಸಿದ ಸಾಹಿತಿಗಳೆಲ್ಲರೂ ಬಿಜೆಪಿ ಸೇರಲಿ:ಎಚ್.ಎಂ.ರೇವಣ್ಣ

ಅನ್ನಭಾಗ್ಯ ಸೇರಿದಂತೆ ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳನ್ನು ಟೀಕಿಸುತ್ತಿರುವ ಸಾಹಿತಿಗಳು ಮುಖವಾಡ ಧರಿಸಿ ಮಾತನಾಡುವ ಬದಲು ಬಿಜೆಪಿ ಸೇರಿಕೊಳ್ಳಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳನ್ನು ಟೀಕಿಸುತ್ತಿರುವ ಸಾಹಿತಿಗಳು ಮುಖವಾಡ ಧರಿಸಿ ಮಾತನಾಡುವ ಬದಲು ಬಿಜೆಪಿ ಸೇರಿಕೊಳ್ಳಲಿ ಎಂದು ವಿಧಾನಪರಿಷತ್ ಸದಸ್ಯ ಎಚ್. ಎಂ, ರೇವಣ್ಣ ಸಲಹೆ ನೀಡಿದ್ದಾರೆ.

ಇದೇ ವೇಳೆ ಪರಿಷತ್ತಿನ ಮತ್ತೊಬ್ಬ ಸದಸ್ಯ ವಿ.ಎಸ್.ಉಗ್ರಪ್ಪ, ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿದ ಎಸ್,ಎಲ್. ಭೈರಪ್ಪನವರು ತಕ್ಷಣವೇ ಬಡವರು ಮತ್ತು ಹಿಂದುಳಿದ ವರ್ಗದ ಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು ಸರ್ಕಾರ ಯೋಜನೆ ಟೀಕಿಸಿದ ಸಾಹಿತಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ಸಾಹಿತಿಗಳಿಗೆ ಏನಾಗಿದೆ ಎಂದು ಅರ್ಥವಾಗುತ್ತಿಲ್ಲ. ಸ್ವತಹ ವಾರಾನ್ನ ಮಾಡಿಕೊಂಡಿದ್ದ ಎಸ್.ಎಲ್.ಭೈರಪ್ಪನವರು, ಕಳೆದ ಎರಡು ವರ್ಷಗಳಿಂದ ಅನ್ನಭಾಗ್ಯದ ಬಗ್ಗೆ  ಮಾತನಾಡಲಿಲ್ಲ. ಈಗ ಕೇಂದ್ರದ ಸವಲತ್ತು ಸಿಕ್ಕ ಮೇಲೆ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ ಎನಿಸುತ್ತದೆ ಎಂದು ಎಚ್. ಎಂ. ರೇವಣ್ಣ ಟೀಕಿಸಿದರು.

ಇವರೆಲ್ಲರೂ ಮುಖವಾಡ ಹಾಕಿಕೊಂಡು ಮಾತನಾಡುವ ಬದಲು ಬಿಜೆಪಿ ಸೇರಲಿ ಎಂದು ಸಲಹೆ ನೀಡಿದರು. ಎಸ್.ಎಲ್. ಭೈರಪ್ಪನವರಿಗೆ ಕೇಂದ್ರ ಸರ್ಕಾರದ ರಾಜಾಶ್ರಯ ಸಿಕ್ಕಿದ ಮೇಲೆ ಇದ್ದಕ್ಕಿದ್ದ ಹಾಗೆಯೇ ಭಾಗ್ಯ ಯೋಜನೆಗಳ ಕುರಿತು ಟೀಕಿಸಿ, ಬಡವರನ್ನು ಅಪಮಾನ ಮಾಡುತ್ತಿದ್ದಾರೆ. ಬಡವರು ಹಿಂದುಳಿದ ವರ್ಗದವರ ಕುರಿತು ಅವರಿಗಿರುವ ಮನಸ್ಥಿತಿಯನ್ನು ಇದು ತೋರಿಸುತ್ತದೆ. ಬಿಜೆಪಿಯ ಆಶ್ರಯ ದೊರೆಯದೇ ಇದ್ದಿದ್ದರೆ ಇವರು ಈ ರೀತಿ ಮಾಡುತ್ತಿರಲಿಲ್ಲ ಎಂದು ವಿ. ಎಸ್. ಉಗ್ರಪ್ಪ ಟೀಕಿಸಿದರು.

ಆರ್ ಎಸ್ ಎಸ್ ಮನಸ್ಥಿತಿಯ ಭೈರಪ್ಪನವರು ಹಾಗೂ ಅನ್ನಭಾಗ್ಯವನ್ನು ಟೀಕಿಸುವವರು ಯಜಮಾನಿಕೆ ಸ್ವಭಾವದವರು, ತಮ್ಮ ಮನೆ ಕೆಲಸದಾಳುಗಳು ಎಂದಿಗೂ ಕೆಲಸದಾಳಾಗಿಯೇ ಇರಬೇಕೆಂದು ಬಯಸುವವರು ಎಂದು ಅವರು ಆಪಾದಿಸಿದರು.
ಬಡತನದ ಬೇಗೆಯಲ್ಲಿ ಬೆಂದು ಬಂದ ಸಾಹಿತಿಗಳೇ ಈಗ ಸ್ವಾರ್ಥಕ್ಕಾಗಿ ಬಡವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಎಸ್. ಎಲ್. ಭೈರಪ್ಪನವರ ಭಿತ್ತಿ ಆತ್ಮಚರಿತ್ರೆಯಲ್ಲಿ ವಾರಾನ್ನದ ಅವಮಾನವನ್ನು ನಿರೂಪಿಸಿದ್ದಾರೆ. ಇನ್ನು ದೇ. ಜವರೇಗೌಡರು 'ಗುಡಿಸಲಿನಿಂದ ಗಂಗೋತ್ರಿಗೆ ಬಂದೆ' ಎಂದು ಆತ್ಮಕಥನ ಬರೆದುಕೊಂಡಿದ್ದಾರೆ . ಹಸಿವಿನ ಮೂಲದಿಂದ ಬಂದ ಅವರಿಗೆ ಬಡವರ ಅನ್ನ ಸಂಕಟ ಗೊತ್ತಾಗುವುದಿಲ್ಲವೇ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪ್ರಶಸ್ತಿಗಾಗಿ ಲಾಬಿಯೇ? ಕುಂ. ವೀರಭದ್ರಪ್ಪನವರ ಬಹುತೇಕ ಸಾಹಿತ್ಯ ಹಸಿವನ್ನು ಕುರಿತದ್ದಾಗಿದೆ. ಪ್ರೈಮರಿ ಶಾಲೆ ಮೇಸ್ಟ್ರರಾಗಿ ಬಡಮಕ್ಕಳ ದೀನ ಸ್ಥಿತಿ ನಿತ್ಯ ನೋಡಿದವರು. ಅವರ ಸ್ಮರಣಶಕ್ತಿ ಕಡಿಮೆ ಆಗಿದೆಯೇ? ಕೇಂದ್ರ ಸರ್ಕಾರದ ಯಾವುದಾದರೂ ಪ್ರಶಸ್ತಿಗಾಗಿ ಸ್ವಾರ್ಥದಿಂದ ಈ ರೀತಿ ಮಾತನಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಸಾಹಿತಿ ಕೆ. ಮರುಳಸಿದ್ಧಪ್ಪ ಮಾತನಾಡಿ, ಬಡವರಿಗೆ ಸಾಮಾಜಿಕ ಭದ್ರತೆ ಹಾಗೂ ಅವಕಾಶ ವಂಚಿತರಿಗೆ ಅವಕಾಶ ಒದಗಿಸುವುದು ಸರ್ಕಾರದ ಕರ್ತವ್ಯ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಡವರಿಗೆ ಉಚಿತ ಅಕ್ಕಿ ವಿತರಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಹ 3 ರೂಪಾಯಿಗೆ ಅಕ್ಕಿ ವಿತರಿಸಿದ್ದರು. ಆಗ ಮಾತನಾಡದಿದ್ದವರು, ಈಗ ಯಾಕೆ ತಗಾದೆ ತೆಗೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com