ಫೇಲ್ ಆಗಿದ್ದ ವಿದೇಶಿ ವಿದ್ಯಾರ್ಥಿನಿ ಪಾಸ್!

ಅನುತ್ತೀರ್ಣಗೊಂಡಿದ್ದ ವಿದೇಶಿ ವಿದ್ಯಾರ್ಥಿನಿಯೊಬ್ಬರಿಗೆ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಅಂಕಪಟ್ಟಿಯಲ್ಲಿ ಪ್ರಥಮ ದರ್ಜೆ ಅಂಕಗಳನ್ನು...
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು: ಅನುತ್ತೀರ್ಣಗೊಂಡಿದ್ದ ವಿದೇಶಿ ವಿದ್ಯಾರ್ಥಿನಿಯೊಬ್ಬರಿಗೆ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಅಂಕಪಟ್ಟಿ ನೀಡಿ ಅದರಲ್ಲಿ ಪ್ರಥಮ ದರ್ಜೆ ಅಂಕಗಳನ್ನು ನೀಡಿ ಉತ್ತೀರ್ಣ ಮಾಡಿದೆ. ಅಲ್ಲದೆ ಅಂಕಪಟ್ಟಿಯ ಕ್ರಮಸಂಖ್ಯೆಯಲ್ಲಿ ಕಂಡು ಬಂದಿರುವ ವ್ಯತ್ಯಾಸ ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ಬೆಂವಿವಿ ವ್ಯಾಪ್ತಿಯ ಸೇಂಟ್ ಫ್ಲಾರೆನ್ಸ್ ಕಾಲೇಜಿನಲ್ಲಿ ಬಿ.ಎ. ಪತ್ರಿಕೋದ್ಯಮ ಕಲಿಯುತ್ತಿದ್ದ ಅನಿವುಕ್ವು ಚಿಮ್ಡಿಕ್ವು ಎಲ್ಯು ಎಂಬ ವಿದ್ಯಾರ್ಥಿನಿ 2ನೇ ಸೆಮಿಸ್ಟರ್ ಪರೀಕ್ಷೆಯನ್ನು 2014ರ ಮೇ ತಿಂಗಳಿನಲ್ಲಿ ಬರೆದಿದ್ದಾರೆ. ಅದರ ಅಂಕಪಟ್ಟಿಯನ್ನು 2015ರ ಜನವರಿಯಲ್ಲಿ ನೀಡಲಾಗಿದೆ. ಅದರಲ್ಲಿ ವಿದ್ಯಾರ್ಥಿ 500 ಕ್ಕೆ 235 ಅಂಕ ಪಡೆದು ಅನುತ್ತೀರ್ಣಗೊಂಡಿದ್ದಾಳೆ. ಹೆಚ್ಚುವರಿ ಇಂಗ್ಲಿಷಿನಲ್ಲಿ 63, ಪತ್ರಿಕೋದ್ಯಮ ವಿಭಾಗದಲ್ಲಿ 48, ಐಚ್ಛಿಕ ಇಂಗ್ಲಿಷಿನಲ್ಲಿ 50, ಮನಃಶಾಸ್ತ್ರದಲ್ಲಿ 44, ಭಾರತೀಯ ಸಂವಿಧಾನ ವಿಭಾಗದಲ್ಲಿ 50 ಹಾಗೂ ಸಾಮಾನ್ಯ ಇಂಗ್ಲಿಷಿನಲ್ಲಿ ಸೊನ್ನೆ ಅಂಕ ಪಡೆದಿದ್ದಳು.

ವಿದ್ಯಾರ್ಥಿನಿಯ ಪ್ರವೇಶ ಸಂಖ್ಯೆ 13ಎನ್‍ಸಿಎ61037 ಆಗಿತ್ತು. ಇಷ್ಟು ಅಂಕಗಳನ್ನು ಪಡೆದು 2ನೇ ಸೆಮಿಸ್ಟರ್‍ನಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿ 2015ನೇ ಮಾರ್ಚ್ 30 ರಂದು ಬೆಂಗಳೂರು ವಿಶ್ವವಿದ್ಯಾಲಯ ನೀಡಿರುವ ಮತ್ತೊಂದು ಅಂಕಪಟ್ಟಿಯಲ್ಲಿ 500 ಅಂಕಕ್ಕೆ 300 ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾಳೆ. ಸಾಮಾನ್ಯ ಇಂಗ್ಲಿಷಿನಲ್ಲಿ ಸೊನ್ನೆ ಪಡೆದಿದ್ದ ವಿದ್ಯಾರ್ಥಿನಿಗೆ 2 ತಿಂಗಳ ಬಳಿಕ ಇದೇ ವಿಷಯದಲ್ಲಿ 67 ಅಂಕ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆ ಇರುವುದಾಗಿ ಕನ್ನಡ ಪತ್ರಿಕೆಯೊಂದು ವರದಿ ಮಾಡಿದೆ.

ಈ ವಿದ್ಯಾರ್ಥಿಗೆ 2015ರ ಜನವರಿಯಲ್ಲಿ ನೀಡಿದ್ದ ಅಂಕಪಟ್ಟಿಯ ನೋಂದಣೆ ಸಂಖ್ಯೆ 2210152 ಆಗಿದ್ದರೆ 2015ರ ಮಾರ್ಚ್‍ನಲ್ಲಿ ನೀಡುವ ಅಂಕಪಟ್ಟಿ ಕ್ರಮಸಂಖ್ಯೆ 2240150 ಆಗಿದೆ. ಇಲ್ಲಿ ಅಂಕಪಟ್ಟಿಯ ಸಂಖ್ಯೆ 2ನೇ ಬಾರಿ ವಿತರಿಸುವಾಗ ಹಿಂದಿನ ಸಂಖ್ಯೆಗೆ ಹೇಗೆ ಸರಿಯಿತು? ಎಂಬುದೇ ಪ್ರಶ್ನೆ, ಹಾಗೂ ಇದಕ್ಕೆ ಮೌಲ್ಯಮಾಪನ ಕುಲಸಚಿವರು ಸಹಿ ಸಹ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com