ವ್ಯಾಪಾರಿ ಕಿಡ್ನ್ಯಾಪ್ 30 ಲಕ್ಷದ ಚಿನ್ನ ಲೂಟಿ

ಪೊಲೀಸರ ಸೋಗಿನಲ್ಲಿ ಮೆಜೆಸ್ಟಿಕ್ ನಿಂದ ಚಿನ್ನದ ವ್ಯಾಪಾರಿಯೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳು ಅವರಿಂದ 30 ಲಕ್ಷ ಮೌಲ್ಯದ ಸುಮಾರು ಒಂದೂವರೆ ಕೆ.ಜಿ.ಚಿನ್ನ ದೋಚಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮೆಜೆಸ್ಟಿಕ್ ನಿಂದ ಚಿನ್ನದ ವ್ಯಾಪಾರಿಯೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳು ಅವರಿಂದ 30 ಲಕ್ಷ ಮೌಲ್ಯದ ಸುಮಾರು ಒಂದೂವರೆ ಕೆ.ಜಿ.ಚಿನ್ನ ದೋಚಿದ್ದಾರೆ. ಅಲ್ಲದೆ, ಚಿನ್ನ ದೋಚಿದ ದುಷ್ಕರ್ಮಿಗಳು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಚಿಕ್ಕಪೇಟೆ ನಿವಾಸಿ ಧ್ರುವ ಕಿಶನ್ ಚಿನ್ನ ಕಳೆದುಕೊಂಡ ವ್ಯಾಪಾರಿ. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಅವಿನ್ಯೂ ರಸ್ತೆಯಲ್ಲಿ ಚಿನ್ನದ ವ್ಯಾಪಾರ ಮಾಡುವ ಧ್ರುವ ಕಿಶನ್ ಜೂನ್ 19ರಂದು ನೆಲ್ಲೂರಿಗೆ ಹೋಗಿದ್ದರು. ಅದೇ ದಿನ ರಾತ್ರಿ ಅಲ್ಲಿಂದ ಹೊರಟ ಅವರು, ಜೂನ್ 20ರಂದು ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಿದ್ದರು. ಅಂದು ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಮೆಜೆಸ್ಟಿಕ್ ನಲ್ಲಿಳಿದ ಅವರು ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಟೊಯೊಟಾ ಇನೋವಾ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಾವು ಪೊಲೀಸರೆಂದು ಹಾಗೂ ಪ್ರಕರಣವೊಂದರ ವಿಚಾರಣೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ.

ಇದರಿಂದ ಹೆದರಿದ ಧ್ರುವ ಕಾರಿನಲ್ಲಿ ಕುಳಿತಿದ್ದಾರೆ. ಅವರನ್ನು ಬೆದರಿಸಿ, ನಗರದ ವಿವಿಧೆಡೆ ಸುಮಾರು 2 ಗಂಟೆ ಸುತ್ತಾಡಿಸಿ ನಂತರ ಹೊಸೂರು ರಸ್ತೆ ಮಾರ್ಗವಾಗಿ ಸಾಗಿದ ಆರೋಪಿಗಳು ಅಲ್ಲಿನ ಸೂಲಿಗೆರೆ ಬಳಿ ವಾಹನ ನಿಲ್ಲಿಸಿ ಅವರ ಬಳಿ ಇದ್ದ ಒಂದೂವರೆ ಕೆ.ಜಿ ಚಿನ್ನ ಹಾಗೂ ನಗದು ದೋಚಿದ್ದಾರೆ. ನಂತರ ತಾವೇ 500 ರೂಪಾಯಿ ನೀಡಿ ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಬಳಿಕ ಧ್ರುವ ತಮ್ಮ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಗೆ ಬಂದು ಸಹೋದರನ ಜತೆ ಉಪ್ಪಾರಪೇಟೆ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ವ್ಯಾಪಾರಿಯಿಂದ ಆರೋಪಿಗಳು ಹಾಗೂ ಕಾರಿನ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅವರು ಸಂಚರಿಸಿದ ನಗರದ ವಿವಿಧೆಡೆ ಸಿಸಿಟಿವಿ ಇದ್ದಲ್ಲಿ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com