
ಬೆಂಗಳೂರು: ಬೆಳಗಾವಿಯಲ್ಲಿ ಆಡಳಿತ ನ್ಯಾಯಮಂಡಳಿ ಸ್ಥಾಪಿಸಬೇಕೆಂಬ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಬೆಳಗಾವಿಯಲ್ಲಿ ಹೆಚ್ಚುವರಿ ಕೆಎಟಿ ಪೀಠ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ತೀರ್ಮಾನ ಕೈಗೊಂಡಿದೆ.
ಬೆಂಗಳೂರಿನಲ್ಲಿ ಕೆಎಟಿ 3 ಪೀಠಗಳಿದ್ದು, ಇಲ್ಲಿ 29,920 ಪ್ರಕರಣಗಳು ಬಾಕಿ ಇವೆ. ಇದರಿಂದ ಕೇಸುಗಳು ಇತ್ಯರ್ಥವಾಗುತ್ತಿಲ್ಲ. ಹಾಗೆಯೇ ಇರುವ ಪೀಠಗಳಿಗೂ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಕೇಸುಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಹಾಗೆಯೇ ಮೂರೂ ಪೀಠಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡಬೇಕೆಂದು ಬೆಳಗಾವಿಯಲ್ಲಿ ಕೆಎಟಿ ಹೆಚ್ಚುವರಿ ಪೀಠ ಸ್ಥಾಪಿಸಬೇಕೆನ್ನುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ. ಈ ಮೂಲಕ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು. ಈ ಹೆಚ್ಚುವರಿ ಪೀಠ ಸ್ಥಾಪನೆಯಿಂದ ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗಲಿದ್ದು, ಇಲ್ಲಿ ಈತನಕ ಸುಮಾರು 6,793 ಕೇಸುಗಳು ಬಾಕಿ ಉಳಿದಿವೆ. ಇವುಗಳನ್ನು ತ್ವರಿತವಾಗಿ ಇತ್ಯಾರ್ಥಗೊಳಿಸಲು ಇದು ನೆರವಾಗಲಿದೆ ಎಂದು ಅವರು ವಿವರಿಸಿದರು.
ಟಿಡಿಆರ್ ದರ ಹೆಚ್ಚಳ
ಬೆಂಗಳೂರು ನಗರದಲ್ಲಿ ಟಿಡಿಆರ್ ಸಮಸ್ಯೆಗಳಿಂದ ರಸ್ತೆ ಅಗಲೀಕರಣ ಕಾಮಗಾರಿಗಳು ವಿಳಂಬವಾಗುತ್ತಿರುವುದನ್ನು ತಡೆಯಲು ಟಿಡಿಆರ್ ದರ ಹೆಚ್ಚಿಸಲಾಗಿದೆ.
ಅಂದರೆ ರಸ್ತೆ ಅಗಲೀಕರಣಕ್ಕೆ 100 ಅಡಿ ಜಾಗ ನೀಡಿದ ಆಸ್ತಿ ಮಾಲೀಕರಿಗೆ 250 ಅಡಿ ಅಳತೆಗೆ ಟಿಡಿಆರ್ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಈವರೆಗೂ 100 ಅಡಿ ಜಾಗಕ್ಕೆ 150 ಅಡಿ ಟಿಡಿಆರ್ ಸಿಗುತ್ತಿತ್ತು. ಇದಕ್ಕೆ ಹೆಚ್ಚಿನ ಜನ ಮುಂದೆ ಬರುತ್ತಿಲ್ಲ. ಇದರಿಂದ ರಸ್ತೆ ಅಗಲೀಕರಣ ಕಾಮಗಾರಿಗಳು ಹಿಂದುಳಿದಿದ್ದವು. ಇದನ್ನು ತಪ್ಪಿಸಲು ಈಗ ಟಿಡಿಆರ್ ನೀಡುವ ದರವನ್ನು ಹೆಚ್ಚಿಸಲಾಗಿದೆ.
Advertisement