ಕಂದಾಯ ನಿವೇಶನದ ಮನೆಗೆ ಸಕ್ರಮ ಭಾಗ್ಯ

ಕಂದಾಯ ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ತೀರ್ಮಾನಿಸಿದೆ...
ಟಿ.ಬಿ. ಜಯಚಂದ್ರ
ಟಿ.ಬಿ. ಜಯಚಂದ್ರ

ಬೆಂಗಳೂರು:ರಾಜಧಾನಿ ಬೆಂಗಳೂರು ಸೇರಿದಂತೆ ಮಹಾನಗರಗಳು ಮತ್ತು ಪಟ್ಟಣಗಳಲ್ಲಿ ಕಂದಾಯ ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಅಕ್ರಮ-ಸಕ್ರಮ ಯೋಜನೆ ಕೋರ್ಟ್ ನಲ್ಲಿ ಸಿಲುಕಿರುವುದರಿಂದ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿರುವ ಸರ್ಕಾರ ಬೆಂಗಳೂರಿನಲ್ಲಿ ಬಾಕಿ ಉಳಿದಿದ್ದ  ರಾಜಕಾಲುವೆ ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಅನುಮೋದಿಸಿದೆ.

ಅಷ್ಟೇ ಅಲ್ಲ, ಎರಡು ಪ್ರಮುಖ ರಸ್ತೆ ಅಗಲೀಕರಣ ಮತ್ತು ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಯೋಜನೆಗಳನ್ನು ಪ್ರಕಟಿಸಿರುವ ಸರ್ಕಾರ ಟಿಡಿಆರ್ ದರವನ್ನು ಹೆಚ್ಚಳ ಮಾಡಿ ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳನ್ನು ಮುಂದುವರಿಸಲು ಯತ್ನಿಸಿವೆ.

ಕಂದಾಯ ನಿವೇಶನಗಳಲ್ಲಿ ನಿರ್ಮಿಸಿರುವ 20-30 ಅಳತೆಯ ಮನೆಗಳನ್ನು ಮಾತ್ರ ಸಕ್ರಮಗೊಳಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ, ವರ್ಗ ಹಾಗೂ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ದಂಡ ಶುಲ್ಕ ಪಡೆಯಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈಗಾಗಲೇ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಿದ್ದರೂ ಅದು ಅಕ್ರಮ ನಿವೇಶನ ಮತ್ತು ಕಟ್ಟಡ ನಿರ್ಮಾಣ ಹಾಗೂ ಬಡಾವಣೆಗಳಿಗೆ ಅನ್ವಯಿಸಲಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 94ಸಿಸಿ ಪ್ರಕಾರ ಈ ಅಕ್ರಮ-ಸಕ್ರಮ ನಡೆಸುತ್ತಿರುವುದರಿಂದ ವಿಶೇಷವಾಗಿ ಕಂದಾಯ ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಅನುಕೂಲವಾಗಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.

ಅಕ್ರಮ-ಸಕ್ರಮ ಹೇಗೆ, ಯಾರಿಗೆ?: ಎಲ್ಲಾ ಮಹಾನಗರ, ನಗರ, ಪಟ್ಟಣಗಳಲ್ಲಿ ಕಂದಾಯ ನಿವೇಶನದಲ್ಲಿ 20-30 ಅಳತೆಯಲ್ಲಿ ಮನೆ ನಿರ್ಮಿಸಿ ಈಗಾಗಲೇ ವಾಸ ಮಾಡುತ್ತಿದ್ದರೆ ಮಾತ್ರ ಸರ್ಕಾರದ ಈ ಅಕ್ರಮ-ಸಕ್ರಮ ಯೋಜನೆ ವ್ಯಾಪ್ತಿಗೆ ಒಳಪಡುತ್ತದೆ. ಬೆಂಗಳೂರಿನಲ್ಲಿ 18 ಕಿ.ಮೀ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿದವರು ಮಾರ್ಗಸೂಚಿ ಬೆಲೆಯ ಶೇ 20ರಷ್ಚು ದಂಡ ಪಾವತಿಸಿ ಮನೆಯನ್ನು ಸಕ್ರಮಗೊಳಿಸಬಹುದು. ಇದರಲ್ಲಿ ಪರಿಶಿಷ್ಟ ಜಾತಿ, ವರ್ಗ ಮತ್ತು ಅಂಗವಿಕಲರಿಗೆ ವಿಧಿಸುವ ದಂಡ ಶೇ 10ರಷ್ಟು ಇರುತ್ತದೆ.

ಅದೇ ರೀತಿ ಇತರ ಪಾಲಿಕೆಗಳಲ್ಲಿ 10 ಕಿ.ಮೀ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿದ್ದರೆ ಮಾತ್ರ ಸಕ್ರಮವಾಗುತ್ತದೆ. ಅಲ್ಲಿ ದಂಡದ ಪ್ರಮಾಣ ಬೆಂಗಳೂರಿಗೆ ಹೋಲಿಸಿದರೆ ಶೇ 5ರಷ್ಟು ಕಡಿಮೆ ಇರುತ್ತದೆ. ಹಾಗೆಯೇ ನಗರ ಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 7 ಕಿ.ಮೀ ಒಳಗೆ ಮ ಮನೆ ನಿರ್ಮಿಸಿದ್ದರೆ ಮಾತ್ರ ಸಕ್ರಮವಾಗುತ್ತದೆ. ಅದಕ್ಕೆ ಅನುಗುಣವಾಗಿ ದಂಡ ಪ್ರಮಾಣ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com