ಕಾರ್ಮಿಕರ ಹೆಸರಿನಲ್ಲಿ ನಕಲಿ ಐಡಿ: ಪತ್ತೆಗೆ ಕ್ರಮ

ಕಾರ್ಮಿಕರ ಹೆಸರಿನಲ್ಲಿ ನಕಲಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದು ವಂಚಿಸುವವರನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ- ಕಾರ್ಮಿಕ ಇಲಾಖೆ ಜಂಟಿ ಆಯುಕ್ತ
ಕಾರ್ಮಿಕರು(ಸಾಂದರ್ಭಿಕ ಚಿತ್ರ)
ಕಾರ್ಮಿಕರು(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಕಾರ್ಮಿಕರ ಹೆಸರಿನಲ್ಲಿ ನಕಲಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದು ವಂಚಿಸುವವರನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಮಂಜುನಾಥ್ ಹೇಳಿದ್ದಾರೆ.

ಕರ್ನಾಟಕ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ವೇದಿಕೆ ಗುರುವಾರ ಏರ್ಪಡಿಸಿದ್ದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯ ಯೋಜನೆ- ಸಾರ್ವಜನಿಕ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸುಮಾರು 10 ಲಕ್ಷ ಕಾರ್ಮಿಕರಿದ್ದು ಅವರಲ್ಲಿ ಶೇ.70 ರಷ್ಟು ಮಂದಿ ಇನ್ನೂ ನೋಂದಣಿ ಮಾಡಿಸಿಕೊಂಡಿಲ್ಲ. ಆದರೆ ಕಾರ್ಮಿಕರಲ್ಲದವರು ಇಲಾಖೆಯಿಂದ ಗುರುತಿನ ಚೀಟಿ ಪಡೆದಿರುವ ಪ್ರಕರಣಗಳು ಸಾವಿರಾರಿವೆ. ಸರ್ಕಾರದ ಬಳಿಯೇ ಎಷ್ಟು ಮಂದಿ ಕಟ್ಟಡ ಹಾಗು ಇತರೆ ಕಾರ್ಮಿಕರಿದ್ದಾರೆ ಎಂಬ ಮಾಹಿತಿ ಇಲ್ಲ. ಹಾಗಾಗಿ ಜಾತಿವಾರು ಗಣತಿಯನ್ನು ಆಧರಿಸಿ ಇದನ್ನು ಪತ್ತೆ ಮಾಡಲು ಚಿಂತಿಸಲಾಗುತ್ತಿದೆ. ಆಗ ಎಷ್ಟು ಮಂದಿ ಕಾರ್ಮಿಕರಿದ್ದಾರೆ ಎಂಬುದು ತಿಳಿಯಲಿದೆ. ಆನಂತರ ಇಲಾಖೆ ಅಧಿಕಾರಿಗಳು ಕಾರ್ಮಿಕರ ಮನೆಗಳಿಗೆ ಹೋಗಿ ಗುರುತಿನ ಚೀಟಿ ನೀಡುತ್ತಾರೆ ಎಂದರು.

ಡಿಜಿಟಲ್ ವ್ಯವಸ್ಥೆ: ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲು ಹೈಟೆಕ್ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಅಧಿಕಾರಿಗಳಿಗೆ ಕಸ್ಟಮೈಜ್ಡ್ ಟ್ಯಾಬ್ಲೆಟ್(ನಿಗದಿತ ಉಪಕರಣ) ನೀಡಲಾಗುತ್ತಿದೆ. ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸ್ಥಗಳಿಗೆ ಹೋಗಿ ಕಾರ್ಮಿಕರನ್ನು ಪತ್ತೆ ಮಾಡುತ್ತಾರೆ. ಅಲ್ಲಿಯೇ ಅವರ ಫೋಟೋ, ಬೆರಳಚ್ಚು ಹಾಗೂ ಅಗತ್ಯ ಮಾಹಿತಿ ಪಡೆಯುತ್ತಾರೆ.

ಈ ಸಂಬಂಧ ಸುಧಾರಿತ ತಂತ್ರಜ್ಞಾನ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಸದ್ಯದಲ್ಲೇ ಜಾರಿಗೆ ತರಲಾಗುವುದು. ಇದರಿಂದ ಕೂಡ ನಕಲು ನೋಂದಣಿ ತಪ್ಪಿಸಬಹುದು. ನೋಂದಣಿಯಾದವರ ಹೆಸರು ನಮೂದಿಸಿದರೆ ಅವರ ಪೂರ್ಣ ವಿವರ ಚಿತ್ರ ಸಮೇತ ವಿವರಗಳು ದೊರೆಯುತ್ತವೆ ಎಂದು ಮಂಜುನಾಥ್ ಹೇಳಿದರು. ಜುಲೈ ಅಂತ್ಯದ ವೇಳೆಗೆ ಕಾರ್ಮಿಕರ ಸಂಪೂರ್ಣ ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ರಾಜ್ಯದಲ್ಲಿರುವ ಕಾರ್ಮಿಕರ ಸ್ಥಿತಿ ಅಧ್ಯಯನ ಅಗತ್ಯವಿದೆ. ಈ ಸಂಬಂಧ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅಧಿಕಾರಿಗಳು ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಂಡು ಅವರನ್ನು ಮನುಷ್ಯರಂತೆ ಕಾಣಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com