ಕೆಸಿಡಿಸಿಯಲ್ಲಿ ಬಾಲ ಕಾರ್ಮಿಕ ಶಂಕಾಸ್ಪದ ಸಾವು

ಎಚ್‍ಎಸ್‍ಆರ್ ಬಡಾವಣೆ ಸಮೀಪದ ಹೊಸಪಾಳ್ಯದಲ್ಲಿರುವ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದಲ್ಲಿ(ಕೆಸಿಡಿಸಿ) 10 ವರ್ಷದ ಬಾಲಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಎಚ್‍ಎಸ್‍ಆರ್ ಬಡಾವಣೆ ಸಮೀಪದ ಹೊಸಪಾಳ್ಯದಲ್ಲಿರುವ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದಲ್ಲಿ(ಕೆಸಿಡಿಸಿ) 10 ವರ್ಷದ ಬಾಲಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಇಲ್ಲಿನ ಸೋಮಸುಂದರಪಾಳ್ಯದ ಶೆಡ್‍ನಲ್ಲಿ ವಾಸವಿರುವ ವರಲಕ್ಷ್ಮಿ ಎಂಬುವರ ಪುತ್ರ ನರಸಿಂಹಮೂರ್ತಿ ಮೃತ ಬಾಲಕ. ಆತನ ಸಾವಿಗೆ ಕೆಸಿಡಿಸಿ ಸಿಬ್ಬಂದಿಯೇ ಕಾರಣ ಎಂದು
ಆರೋಪಿಸಿ ಸ್ಥಳೀಯರು ಕೆಸಿಡಿಸಿ ಕಟ್ಟಡದ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಬಾಲಕನ ಸಾವಿನ ಹಿಂದೆ ಯಾವುದೇ ದುರುದ್ದೇಶ ಕಂಡು ಬಂದಿಲ್ಲ. ಆದರೆ, ಕೆಸಿಡಿಸಿ ಅಧಿಕಾರಿಗಳ ನಿರ್ಲಕ್ಷತನದಿಂದ ಸಂಭವಿಸಿದೆ ಎಂದು ಎಚ್‍ಎಸ್ ಆರ್ ಬಡಾವಣೆ ಪೊಲೀಸರು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆಯೇ ಪತಿ ತೊರೆದಿರುವ ವರಲಕ್ಷ್ಮಿ ಅವರು 7 ಮಕ್ಕಳೊಂದಿಗೆ ಶೆಡ್ ನಲ್ಲಿ ವಾಸವಿದ್ದಾರೆ. ಶಾಲೆ ಅರ್ಧಕ್ಕೆ ಬಿಟ್ಟಿದ್ದ ಬಾಲಕ ನರಸಿಂಹಮೂರ್ತಿ, ಕೆಸಿಡಿಸಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಸಿಡಿಸಿಯೋಳಗೆ ಪ್ರವೇಶಿಸಿ ಕಾರ್ಯ ನಿರ್ವಹಿಸುತ್ತಿದ್ದ ಕಂಪೋಸ್ಟ್ ಯಂತ್ರದ ಬೆಲ್ಟ್ ಮೇಲೆ ಆಕಸ್ಮಿಕವಾಗಿ ಕೈ ಇಟ್ಟಿದ್ದಾನೆ. ಯಂತ್ರದ ಸೆಳೆತಕ್ಕೆ ಸಿಕ್ಕಿ ಬಾಲಕ ಕೆಲ ಮೀಟರ್ ಗಳ ದೂರಕ್ಕೆ ಹಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ಕೆಸಿಡಿಸಿಯಲ್ಲಿರುವ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಸಿಡಿಸಿ ಅಧಿಕಾರಿಗಳು ಮಗನಿಂದ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದರು. ಅವರ ನಿರ್ಲಕ್ಷ್ಯತನದಿಂದಲೇ ಚಾಲನೆಯಲ್ಲಿದ್ದ ಕಾಂಪೋಸ್ಟ್ ಯಂತ್ರದ ಬೆಲ್ಟ್‍ಗೆ ಕೈ ಹಾಕಿ ಬಾಲಕ ಮೃತಪಟ್ಟಿದ್ದಾನೆ ಎಂದು ಮೃತನ ತಾಯಿ ವರಲಕ್ಷ್ಮಿ ಆರೋಪಿಸಿದ್ದಾರೆ.

ಬಾಲಕನ ಸಾವಿನ ವಿಷಯ ತಿಳಿದ ಸ್ಥಳೀಯರು ಕೆಸಿಡಿಸಿ ಎದುರು ಪ್ರತಿಭಟನೆ ನಡೆಸಿದರು. ಕೆಸಿಡಿಸಿ  ವಿರುದ್ಧ ನಿರ್ಲಕ್ಷ್ಯತನ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಎಂದು ಎಚ್‍ಎಸ್‍ಆರ್ ಬಡಾವಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಘನತ್ಯಾಜ್ಯ ನಿರ್ವಹಣಾ ಘಟಕದ ವಿಶೇಷ ಆಯುಕ್ತ ದರ್ಪಣ್ ಜೈನ್, ಮಾಹಿತಿ ಸಂಗ್ರಹಿಸಿದರು.

ಮೃತ ಬಾಲಕನ ತಾಯಿಯೊಂದಿಗೆ ಮಾತನಾಡಿದರು. ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಮಾತನಾಡಿದರು. ಮೃತ ಬಾಲಕನ ಕುಟುಂಬಕ್ಕೆ ಪಾಲಿಕೆ ವತಿಯಿಂದ ರು.2 ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com