ಬಿಬಿಎಂಪಿ ಚುನಾವಣೆ: ಮತಪ್ರಮಾಣ ಹೆಚ್ಚಳಕ್ಕೆ ಕ್ರಮ

ಮತದಾರರ ಪಟ್ಟಿಗೆ ಹೆಚ್ಚಿನವರನ್ನು ಸೇರ್ಪಡೆಗೊಳಿಸುವ ಮೂಲಕ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಮತದಾರರ ಪಟ್ಟಿಗೆ ಹೆಚ್ಚಿನವರನ್ನು ಸೇರ್ಪಡೆಗೊಳಿಸುವ ಮೂಲಕ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಶೇ.50ಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿಲ್ಲ. ರಾಜ್ಯದ ಬೇರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯಲ್ಲೇ ಮತದಾನದ ಪ್ರಮಾಣ ಅತಿ ಕಡಿಮೆಯಾಗಿದೆ. 2010ರ ಹಾಗೂ 2001ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಶೇ.44 ರ ಪ್ರಮಾಣದಲ್ಲಿ ಮತದಾನವಾಗಿತ್ತು. ಶೇಕಡಾವಾರು ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗದಿಂದ ಈ ಬಾರಿ ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಎಲ್ಲ ವಾರ್ಡ್‍ಗಳಲ್ಲಿ ಬಿಬಿಎಂಪಿಯಿಂದ ಜಾಹೀರಾತು ನೀಡುವ ಮೂಲಕ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಸಂದೇಶ ನೀಡಲಾಗುತ್ತದೆ. ಮತದಾರರ ಪಟ್ಟಿಗೆ ಹೆಚ್ಚಿನವರನ್ನು ಸೇರ್ಪಡೆಗೊಳಿಸುವ ಮೂಲಕ ಪ್ರಮಾಣ ಹೆಚ್ಚಿಸಲು ಕಳೆದ ಒಂದು ವರ್ಷದಿಂದಲೇ ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಜು.15ರವರೆಗೂ ಅವಕಾಶ ಕಲ್ಪಿಸಲಾಗಿದೆ. 2015 ರ ಆರಂಭದಿಂದ ಇಲ್ಲಿಯವರೆಗೆ 82,076 ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಹೀಗೆ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ ಗುರುತಿನ ಚೀಟಿ ನೀಡುವಾಗಲೇ, ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶ ನೀಡಲಾಗುತ್ತಿದೆ.

ರಾಜ್ಯ ಚುನಾವಣಾ ಆಯೋಗಕ್ಕೆ ಜೂ.15ರವರೆಗಿನ ಮತದಾರರ ಪರಿಷ್ಕೃತ ಪಟ್ಟಿಯನ್ನು ನೀಡಲಾಗುತ್ತಿದ್ದು, ಮುಂದಿನ ಸೋಮವಾರದಿಂದ ಬಿಬಿಎಂಪಿ ವೆಬ್‍ಸೈಟ್‍ನಲ್ಲೂ ಪಟ್ಟಿಯನ್ನು
ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ: ಪ್ರತಿ ವಾರ್ಡ್ ಕಚೇರಿ, ಬೆಂಗಳೂರು-1 ಕೇಂದ್ರ, ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದು. ಹೊಸದಾಗಿ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ನಮೂನೆ 6, ಈಗಾಗಲೇ ಪಟ್ಟಿಯಲ್ಲಿರುವ ಹೆಸರನ್ನು ರದ್ದು ಮಾಡಲು ಅರ್ಜಿ ನಮೂನೆ 7, ಹೆಸರು ಅಥವಾ ವಿಳಾಸದ ತಿದ್ದುಪಡಿಗಾಗಿ ನಮೂನೆ 8 ಹಾಗೂ ವಾರ್ಡ್ ವರ್ಗಾವಣೆಗಾಗಿ 8 `ಎ' ನಮೂನೆಯ ಅರ್ಜಿ ಪಡೆದು ಸಲ್ಲಿಸಬೇಕು.

ವರ್ಗಾವಣೆ ಮಾಡಿಕೊಳ್ಳುವಾಗ ಅದೇ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ, ನಮೂನೆ 8`ಎ' ಅರ್ಜಿಯಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು. ವಿಧಾನಸಭಾ ಕ್ಷೇತ್ರ ಬದಲಾವಣೆ ಮಾಡಿಕೊಳ್ಳಬೇಕೆಂದಿದ್ದರೆ, ಮೊದಲು ನಮೂನೆ 7 ರ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಿ, ಹೆಸರು ರದ್ದು ಮಾಡಬೇಕು. ನಂತರ ಹೊಸದಾಗಿ ನಮೂನೆ 6ರ ಅರ್ಜಿ ಪಡೆದು ಭರ್ತಿ ಮಾಡಿ
ಸಲ್ಲಿಸಬೇಕು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದಾದರೆ www.ceokarnataka.kar.nic.in ಹಾಗೂ ಮತದಾರರ ಪರಿಷ್ಕೃತ ಪಟ್ಟಿಯ ವೀಕ್ಷಣೆಗೆ http://bbmp.gov.in ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com