ಪ್ರತ್ಯೇಕ ಪ್ರಕರಣಗಳಲ್ಲಿ ಎಸ್ಸೈಗಳ ಮೇಲೆ ಹಲ್ಲೆ

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕೆ ಪ್ರಕರಣ ದಾಖಲಿಸಲು ಮುಂದಾದ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಮೇಲೆ ಕುಪಿತಗೊಂಡ ಟ್ಯಾಕ್ಸಿ ಚಾಲಕ ಹಲ್ಲೆ ನಡೆಸಿರುವ ಘಟನೆ ಹರಳೂರು ರಸ್ತೆಯಲ್ಲಿ ನಡೆದಿದೆ...
ಪ್ರತ್ಯೇಕ ಪ್ರಕರಣಗಳಲ್ಲಿ ಎಸ್ಸೈಗಳ ಮೇಲೆ ಹಲ್ಲೆ (ಸಾಂದರ್ಭಿಕ ಚಿತ್ರ)
ಪ್ರತ್ಯೇಕ ಪ್ರಕರಣಗಳಲ್ಲಿ ಎಸ್ಸೈಗಳ ಮೇಲೆ ಹಲ್ಲೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕೆ ಪ್ರಕರಣ ದಾಖಲಿಸಲು ಮುಂದಾದ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಮೇಲೆ ಕುಪಿತಗೊಂಡ ಟ್ಯಾಕ್ಸಿ ಚಾಲಕ ಹಲ್ಲೆ ನಡೆಸಿರುವ ಘಟನೆ ಹರಳೂರು ರಸ್ತೆಯಲ್ಲಿ ನಡೆದಿದೆ.

ಮಡಿವಾಳ ಸಂಚಾರ ಪೊಲೀಸ್ ಠಾಣೆ ಎಸ್ಸೈ ಚಂದ್ರಾಧರ ಹಲ್ಲೆಗೊಳಗಾದವರು. ಈ ಸಂಬಂಧ ಆರೋಪಿ ಟ್ಯಾಕ್ಸಿ ಚಾಲಕ ಕಿರುಣ್ ಕುಮಾರ್ ಎಂಬಾತನ ಬಂಧಿಸಲಾಗಿದೆ.

ವೆಂಕಟಾಪುರ ನಿವಾಸಿ ಕಿರಣ್, ಗುರುವಾರ ಮಧ್ಯಾಹ್ನ ಸ್ನೇಹಿತರ ಜತೆ ಕಾರಿನಲ್ಲಿ ಸರ್ಜಾಪುರಕ್ಕೆ ಹೋಗಿದ್ದ. ರಾತ್ರಿ 8.30ರ ಸುಮಾರಿಗೆ ಮನೆಗೆ ವಾಸಪಸ್ಸಾಗುತ್ತಿದ್ದ ವೇಳೆ ಹರಳೂರು ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಸೈ ಚಂದ್ರಾಧರ ಹಾಗೂ ಸಿಬ್ಬಂದಿ ಟ್ಯಾಕ್ಸಿಯನ್ನು ನಿಲ್ಲಿಸಿ ಅಲ್ಕೋಮೀಟರ್ ಮೂಲಕ ಪರಿಶೀಲಿಸಿದಾಗ ಕಿರಣ್ ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಪ್ರಕರಣ ದಾಖಲಿಸಲು ಮುಂದಾದಾಗ ಕಿರಣ್, ಎಸ್ಸೈ ಅವರನ್ನು ಕೆಳಗೆ ತಳ್ಳಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ.

ಘಟನೆಯಲ್ಲಿ ಚಂದ್ರಾಧರ ಅವರ ಕೈ ಕಾಲಿಗೆ ತರಚಿದ ಗಾಯಗಳಾಗಿವೆ. ಪರಾರಿಯಾಗಲು ಯತ್ನಿಸಿದ ಕಿರಣ್‍ನನ್ನು ಸ್ಥಳೀಯರು ಹಿಡಿದಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಎಚ್‍ಎಸ್‍ಆರ್ ಬಡಾವಣೆ ಪೊಲೀಸರು ಕಿರಣ್‍ನನ್ನು ಬಂಧಿಸಿದ್ದಾರೆ. ಆತ ಅತಿಯಾಗಿ ಮದ್ಯಪಾನ ಮಾಡಿರುವುದು ಅಲ್ಕೋಮೀಟರ್‍ನಲ್ಲಿ ದೃಢಪಟ್ಟಿತ್ತು. ಪ್ರಕರಣ ದಾಖಲಿಸಿ ವಾಹನ ವಶಕ್ಕೆ ಪಡೆಯಲು ಮುಂದಾದಾಗ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಎಸ್ಸೈ ಚಂದ್ರಾಧರ ದೂರು ಸಲ್ಲಿಸಿದ್ದಾಗಿ
ಪೊಲೀಸರು ತಿಳಿಸಿದ್ದಾರೆ.

ತಪಾಸಣೆ ವೇಳೆ ಹಲ್ಲೆ :
ಮತ್ತೊಂದು ಪ್ರಕರಣದಲ್ಲಿ ಇಂದಿರಾ ನಗರದ 100 ಅಡಿ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಇಂದಿರಾ ನಗರ ಸಂಚಾರ ಠಾಣೆ ಎಸ್ಸೈ ನಂಜುಂಡಯ್ಯ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಆರೋಪಿಗಳಾದ ಕಾರು ಚಾಲಕರಾದ ತರುಣ್, ಗುಪ್ತಾ ಎಂಬುವರನ್ನು ಇಂದಿರಾ ನಗರ ಕಾನೂನು ಸುವ್ಯವಸ್ಥೆ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಎಸ್ಸೈ ನಂಜುಂಡಯ್ಯ ಹಾಗೂ ಕಾನ್ಸ್ ಟೇಬಲ್ ಸಾಗರ್ ಅವರು ವಾಹನಗಳ ತಡೆದು ತಪಾಸಣೆ ನಡೆಸುತ್ತಿದ್ದಾಗ ಬಂದ ಕಾರು ಚಾಲಕ ತರುಣ್, ಮದ್ಯಪಾನ ಮಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ ಎಸ್ಸೈ, ರಸೀದಿ ನೀಡಿದ್ದಾರೆ.

ನ್ಯಾಯಾಲಯದಲ್ಲಿ ದಂಡ ಕಟ್ಟಿ ಕಾರನ್ನು ಬಿಡಿಸಿಕೊಂಡು ಹೋಗುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಕಾರಿನಲ್ಲಿದ್ದ ಮೂವರು ಕೆಳಗಿಳಿದು ಎಸ್ಸೈ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಕೂಡಲೇ ಜತೆಗಿದ್ದ ಕಾನ್ಸ್ ಟೇಬಲ್ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಪ್ತಾ ಹಾಗೂ ತರುಣ್‍ನನ್ನು ಬಂಧಿಸಿದ್ದು ವಿನೋದ್ ಎಂಬಾತ ಪರಾರಿಯಾಗಿದ್ದಾನೆ. ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಡಿಕ್ಕಿ:
ಬೈಕ್ ಸವಾರ ಸಾವು: ಮೈಸೂರು ರಸ್ತೆ ಗೋಪಾಲನ್ ಮಾಲ್ ಬಳಿ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಕೆಂಗೇರಿ ಉಪನಗರ ನಿವಾಸಿ ಗಿರೀಶ್ ಜಿ. ಕಾಮತ್ (45) ಮೃತ ವ್ಯಕ್ತಿ. ಕಸ್ತೂರ ಬಾ ರಸ್ತೆಯಲ್ಲಿರುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರು ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದೆ.

 ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com