ಮರು ಮೌಲ್ಯಮಾಪನ: ಹಣ ಕೊಟ್ಟು ಅಂಕ, ರ್ಯಾಂಕ್ ಕಳೆದುಕೊಂಡ ವಿದ್ಯಾರ್ಥಿಗಳು!

ಪರೀಕ್ಷೆ ಮೌಲ್ಯಮಾಪನದಲ್ಲಿ ಎಡವಟ್ಟಾಗಿದೆ ಎಂಬ ಆತಂಕಕ್ಕೆ ಬಿದ್ದು ಅಂಕ ಗಳಿಸಿದ ವಿದ್ಯಾರ್ಥಿಗಳೂ ಸಹ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ ದೊಡ್ಡ ಸಂಖ್ಯೆಯಲ್ಲಿ ಅಂಕ ಕಳೆದುಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ(ಸಾಂದರ್ಭಿಕ ಚಿತ್ರ)
ದ್ವಿತೀಯ ಪಿಯುಸಿ ಫಲಿತಾಂಶ(ಸಾಂದರ್ಭಿಕ ಚಿತ್ರ)

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದ ಒಂದು ಮಜಲು ಮುಗಿದಿದೆ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ, ನಂತರ ಮರು ಮೌಲ್ಯಮಾಪನ ಕಾರ್ಯವೂ ಮುಗಿದಿದೆ. ಈ  ವಿಚಾರದಲ್ಲಿ ಅನಗತ್ಯ ಹುಟ್ಟಿಕೊಂಡ ಗೊಂದಲದಿಂದ ಪದವಿಪೂರ್ವ ಇಲಾಖೆ ವರ್ಚಸ್ಸು ಕುಂದಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ವಿದ್ಯಾರ್ಥಿ-ಪೋಷಕರು ದೊಡ್ಡ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ.

ಇನ್ನೂ ಒಂದು ಆಶ್ಚರ್ಯಕರ ಸಂಗತಿ ಎಂದರೆ ಪಿಯು ಪರೀಕ್ಷೆ ಮೌಲ್ಯಮಾಪನದಲ್ಲಿ ಏನೋ ಎಡವಟ್ಟಾಗಿದೆ ಎಂಬ ಆತಂಕಕ್ಕೆ ಬಿದ್ದು ಅಂಕ ಗಳಿಸಿದ ವಿದ್ಯಾರ್ಥಿಗಳೂ ಸಹ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ ದೊಡ್ಡ ಸಂಖ್ಯೆಯಲ್ಲಿ ಅಂಕ ಕಳೆದುಕೊಂಡಿದ್ದಾರೆ. ಪರಿಣಾಮ ವೃತ್ತಿ ಶಿಕ್ಷಣ ಸೀಟು ಪಡೆಯಲು ಬೇಕಾದ ರ್ಯಾಂಕ್ ನಲ್ಲಿ ಕುಸಿತ ಕಂಡಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಒಂದು ಖಾಸಗಿ ವೆಬ್ ಸೈಟ್ ನಲ್ಲಿ ಗೊಂದಲವಾಗಿ ಪ್ರಕಟವಾಗಿತ್ತು. ಇದು ಊಹಾಪೋಹಕ್ಕೆ ಕಾರಣವಾಗಿ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂಬ ಹುಲ್ಲೆದ್ದಿತ್ತು. ಅಚ್ಚರಿಯ ಸಂಗತಿ ಎಂದರೆ ಇದೀಗ ಎಲ್ಲಾ ಮೂರು ಹಂತದ ಮರು ಮೌಲ್ಯಮಾಪನ ಮುಗಿದಿದ್ದು ಕಳೆದ ಬಾರಿಗಿಂತ ಕಡಿಮೆ ಲೋಪದೋಷ ದಾಖಲಾಗಿದೆ. ಜೊತೆಗೆ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಇಲಾಖೆ ತನ್ನ ಚಟುವಟಿಕೆಯನ್ನು ಪೂರ್ತಿಗೊಳಿಸಿದೆ.

ಈ ಬಾರಿ 6 .10 ಲಕ್ಷ ವಿದ್ಯಾರ್ಥಿಗಳ ಪೈಕಿ ಉತ್ತರ ಪತ್ರಿಕೆ ಪ್ರತಿಗೆ ಅರ್ಜಿ ಹಾಕಿದ್ದವರು ಬರೋಬ್ಬರಿ 55 ಸಾವಿರ. ಕಳೆದ ಬಾರಿಗಿಂತಲೂ 15 ಸಾವಿರ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಇನ್ನು 37 ಸಾವಿರ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಕಳೆದಬಾರಿಗಿಂತ ಈ ಸಂಖ್ಯೆ ದುಪ್ಪಟ್ಟು.

ಕಳೆದುಕೊಂಡಿದ್ದೆ ಹೆಚ್ಚು: ಉತ್ತರ ಪತ್ರಿಕೆ ಫೋಟೋಪ್ರತಿಗೆ ಬಂದ 54 ಸಾವಿರ ಅರ್ಜಿಗಳಿಗೆ ತಲಾ 504 ರೂಪಾಯಿಯಂತೆ ವಿದ್ಯಾರ್ಥಿಗಳು ಕಟ್ಟಿದ್ದಾರೆ. ಇನ್ನು ಮರು ಮೌಲ್ಯಮಾಪನಕ್ಕೆ 36 ಸಾವಿರ ಅರ್ಜಿ ಬಂದಿದ್ದು ಇದಕ್ಕೆ ತಲಾ 1 ,260 ರೂಪಾಯಿಯಂತೆ ಹಣ ಪಾವತಿಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಸ್ಥಿತಿ ಹಣ ಕೊಟ್ಟು ಅಂಕ ಕಳೆದುಕೊಂಡಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com