ಅಕಾಲಿಕ ಮಳೆ ; ಹಾಳಾಯ್ತೆ ಬೆಳೆ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆ ರೈತರಲ್ಲಿ ಬೆಳೆ ಹಾನಿಯಆತಂಕ ಮೂಡಿಸಿದೆ...
ಬೆಳೆ ಹಾನಿ
ಬೆಳೆ ಹಾನಿ

ಹುಬ್ಬಳ್ಳಿ/ಬೆಳಗಾವಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆ ರೈತರಲ್ಲಿ ಬೆಳೆ ಹಾನಿಯಆತಂಕ ಮೂಡಿಸಿದೆ. ಉತ್ತರ ಕರ್ನಾಟಕದಲ್ಲಿ ಇದು ಹಿಂಗಾರು ಹಂಗಾಮಿನ ಕೊಯ್ಲು ಸಮಯ. ಕಡಲೆ ಮತ್ತು ಗೋದಿ, ಜೋಳ, ಗೋವಿನ ಜೋಳಗಳನ್ನು ಕೊಯ್ಲು ಮಾಡಿ ಹೊಲದಲ್ಲಿ ಒಣಗಲು ಬಿಡಲಾಗಿದೆ. ಶನಿವಾರವೇ ಮೋಡ ಕವಿದ ವಾತಾವರಣ ಕಂಡುಬಂದಿದ್ದರೂ ರೈತರು ಮಳೆ ಬರಲಿಕ್ಕಿಲ್ಲ ಎನ್ನುವ ಭಾವನೆಯಲ್ಲಿದ್ದರು. ಹೀಗಾಗಿ ಕೊಯ್ಲು ಮಾಡಿದ ಫಸಲನ್ನು ಹೊಲದಲ್ಲಿಯೇ  ಬಿಡಲಾಗಿತ್ತು. ಭಾನುವಾರ ಬೆಳಗಿನ ಜಾವ ಇದ್ದಕ್ಕಿದ್ದಂತೆ ಮಳೆ ಶುರುವಾಯಿತು. ಹೀಗಾಗಿ ರೈತರು ಬೆಳೆ ತೋಯ್ದು ಹೋಗಿದೆ. ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ರೈತರು ಈಗ ನಷ್ಟದ ಆತಂಕ ಎದುರಿಸುತ್ತಿದ್ದಾರೆ.
ಕೆಲವೆಡೆ ತುಂತುರು ಮಳೆ ಮುಂದುವರಿದಿದೆ. ಹುಬ್ಬಳ್ಳಿ ನಗರ ಸೇರಿ ಧಾರವಾಡ ಜಿಲ್ಲೆಯಾದ್ಯಂತ ತುಂತುರು ಮಳೆ ಬಿದ್ದಿದೆ. ಗ್ರಾಮೀಣ ಪ್ರದೇಶದಲ್ಲಿ ಕೊಯ್ಲು ಮಾಡಿದ ಮೆಣಸಿನಕಾಯಿ, ಜೋಳ, ಗೋದಿ, ಕಡಲೆ ಇತರ ಬೆಳೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಗದಗ, ಹಾವೇರಿ,ಕೊಪ್ಪಳ ಜಿಲ್ಲೆಯಲ್ಲೂ ಹಲವೆಡೆ ಸಾಧಾರಣ, ಕೆಲವೆಡೆ ತುಂತುರು ಮಳೆಯಾಗಿದೆ.

ಇಟ್ಟಂಗಿ ತಯಾರಕರಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಕರಾವಳಿಯಲ್ಲಿ ಪ್ರಮಾಣ ಹೆಚ್ಚಿತ್ತು. ಜಿಲ್ಲೆಯಲ್ಲಿ ಕಟಾವಿಗೆ ಬಂದ ಬತ್ತ, ಒಣಗಲು ಹಾಕಿದ್ದ ಅಡಕೆಗೆ ಹಾನಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ ಜೋರಾಗಿಯೇ  ಮಳೆ ಸುರಿದಿದೆ. ಕಡಲೆ, ಗೋಧಿ ,ಹಿಂಗಾರು ಜೋಳ ಮತ್ತು ಗೋವಿನ ಜೋಳದ ಬೆಳೆಗೆ ಹಾನಿಯುಂಟಾಗಿದೆ. ಅಲ್ಲಲ್ಲಿ ದ್ರಾಕ್ಷಿ ಬೆಳೆಗೂ ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಹೀಗಾಗಿ ದ್ರಾಕ್ಷಿ ಬೆಳೆಗಾರರು ವರ್ಷ ಪೂರ್ತಿ ಹಲವಾರು ತೊಂದರೆಗಳನ್ನು ಎದುರಿಸುವಂತಾಗಿದೆ. ಮಳೆ ಸುರಿಯುವುದು ಮುಂದುವರಿದಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಅಲ್ಲಲ್ಲಿ ಮಳೆಯಾಗಿ ದೆ. ಬಾಗಲಕೋಟೆಯಲ್ಲಿ ಮಳೆಯಾಗದಿದ್ದರೂ ದಿನವಿಡೀ ಮೋಡ ಕವಿದ ವಾತಾವರಣವಿತ್ತು.ಮಾವಿಗೂ ಹಾನಿ: ಬೀದರ್-ಕಲಬುರಗಿ ಅವಳಿ ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿ ಸುರಿದ ಅಕಾಲಿಕ ಮಳೆಯಿಂದ ಕೈಗೆ ಬಂದಿದ್ದ ಬಿಳಿಜೋಳ ಬೆಳೆ ಹಾಗೂ ಮಾವಿನ ಫ ಸಲು ಹಾನಿಯಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಹೊರತುಪಡಿಸಿ ಬೀದರ್, ಭಾಲ್ಕಿ, ಹುಮನಾಬಾದ್ ಹಾಗೂ ಔರಾದ್ ತಾಲೂಕಿನಾದ್ಯಂತ ಶನಿವಾರ ರಾತ್ರಿ ನಾಲ್ಕೈದು ತಾಸು ಮಳೆ ಬಿದ್ದರೆ, ಕಲಬುರಗಿ ನಗರ, ಜೇವ ರ್ಗಿ, ಅಫ್ಜ್ ಲ್ಪುರ, ಚಿತ್ತಾಪುರ, ಚಿಂಚೋಳಿ ತಾಲೂಕಿನ ಹಲವೆಡೆ ಭಾನವಾರ ಬೆಳಗಿನ ಜಾವ ಹಾಗೂ ಮಧ್ಯಾಹ್ನ ಹಗುರದಿಂದ ಸಾಧಾರಣ ಮಳೆಯಾಗಿದೆ. ಶಿವರಾತ್ರಿ ನಂತರ ಬಿಸಿಲಿನಿಂದ ಕಾವೇರಿದ್ದ ವಾತಾವರಣ ಶನಿವಾರದ ಡಿಡೀರ್  ಮಳೆರಾಯನ ಆಗಮನದಿಂದ ತಂಪಾಗಿದೆ.ಯಾವುದೇ ಜೀವ ಹಾನಿಯಾಗಿಲ್ಲ. ಆದರೆ ಬಿಳಿ ಜೋಳ ಮತ್ತು ಮಾವಿನ  ಫಸಲು ಹಾನಿಯಿಂದ ಭಾರಿ ಆತಂಕ ಎದುರಿಸುವಂತಾಗಿದೆ. ಇದೇ ರೀತಿ ಮಳೆ ಮತ್ತು ಮೋಡ ಕವಿದ ವಾತಾವಣ ಮುಂದುವರಿದರೆ ಎರಡೂ ಜಿಲ್ಲೆಯ ಹಲವೆಡೆ ಬೆಳೆದಿರುವ ಬಿಳಿಜೋಳಕ್ಕೆ ಇನ್ನೂ ಭಾರಿ ಹಾನಿಯಾಗಲಿದೆ. ಜೋಳದ ಕಾಳುಗಳು ಕಪ್ಪಾಗುವ ಸಾಧ್ಯ
ತೆಯಿದೆ. ಮಾವಿನ ಕಾಯಿಗಳು ಉದುರುವ ಆತಂಕ ಎದುರಾಗಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಲವೆಡೆ ತೆರಳಿ ಬೆಳೆಗಳ ಸಮೀಕ್ಷೆ ನಡೆಸಿದ್ದಾರೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗಳಲ್ಲೂ ತುಂತುರು ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಮಳೆಯ ಸಿಂಚನವಾಗಿದೆ. ಹಾಗೆಯೇ  ಶನಿವಾರ ರಾತ್ರಿಮತ್ತು ಭಾನುವಾರ ಸಂಜೆ ವೇಳೆಗೆ ಬೆಂಗಳೂರಿನ ಕೆಲವೆಡೆ ಗಳಲ್ಲೂ ಮಳೆಯಾಗಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com