ಕಸಾಯಿಖಾನೆ ವಿರೋಧಿಸಿದ್ದ ಅರ್ಜಿ ವಜಾ

ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಕಸಾಯಿಖಾನೆ ನಿರ್ಮಾಣ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಕಸಾಯಿಖಾನೆ ನಿರ್ಮಾಣ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಹಾರೋಹಳ್ಳಿ ಬಳಿಯ ಸಿದ್ದಾಪುರದ ಕೈಗಾರಿಕ ಪ್ರದೇಶದಲ್ಲಿ 40 ಎಕರೆ ಜಾಗದಲ್ಲಿ ಕಸಾಯಿಖಾನೆ ನಿರ್ಮಿಸಲು 2008ರಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸ್ಥಳೀಯರಾದ ರಾಮಣ್ಣ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ನ್ಯಾ.ಕೆ.ಎಲ್. ಮಂಜುನಾಥ್ ಹಾಗೂ ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ವಿಭಾಗೀಯ ಪೀಠ, ಕಸಾಯಿಖಾನೆ ನಿರ್ಮಾಣದಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂದು ಅರ್ಜಿದಾರರ ವಾದ ಈ ಹಂತದಲ್ಲಿ ಪರಿಗಣಿಸಲು ಸಾಧ್ಯವಿಲ್ಲ.

ಅಲ್ಲದೇ ಸದ್ಯ ಈ ಅರ್ಜಿ ಅಪ್ರಬುದ್ದ ಎನಿಸುತ್ತದೆ. ಸರ್ಕಾರ ಆದೇಶ ಹೊರಡಿಸಿ 4 ವರ್ಷಗಳ ನಂತರ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ಸಲ್ಲಿಕೆ ವಿಳಂಬವಾಗಿರುವುದಾಗಿ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು. ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶಕ್ಕಾಗಿ ಆ ಜಾಗ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 40 ಎಕರೆ ಜಾಗವನ್ನು ಕಸಾಯಿಕಾನೆ ನೀಡಲಾಗಿದೆ. ಕೈಗಾರಿಕಾ ಉದ್ದೇಶಕ್ಕಾಗಿ ನೀಡಿರುವ ಒಟ್ಟಾರೆ 2 ಸಾವಿರ ಎಕರೆ ಜಾಗದಲ್ಲಿ ಇದೊಂದನ್ನು ಮಾತ್ರ ಪ್ರಶ್ನೆ ಮಾಡಲಾಗಿದೆ. ಹಾಗೊಂದು ವೇಳೆ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಾದಲ್ಲಿ ಒಟ್ಟಾರೆ ಕೈಗಾರಿಕೆ ಪ್ರದೇಶಕ್ಕೆ ನೀಡಿದ್ದ ಜಾಗವನ್ನೇ ಪ್ರಶ್ನಿಸಬೇಕು.

ಅಲ್ಲದೇ ಕಸಾಯಿಖಾನೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕಸಾಯಿಖಾನೆ ಕಾರ್ಯನಿರ್ವಾಹಣೆ ಮಾಡದಿದ್ದಲ್ಲಿ ಮಾತ್ರ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಅರ್ಜಿದಾರರಿಗೆ ಅವಕಾಶ ಕಲ್ಪಿಸಿ ಅರ್ಜಿ ವಜಾ ಮಾಡಿತು. ಬಿಬಿಎಂಪಿ ವ್ಯಾಪ್ತಿಯಲ್ಲಿನ ಶಿವಾಜಿನಗರ, ಟ್ಯಾನರಿ ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಕಸಾಯಿಖಾನೆ ನಡೆಸಲಾಗಿತ್ತು.

ಸ್ಥಳೀಯರಿಂದ ಬಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಸದ್ಯ ಈ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಕಸಾಯಿಖಾನೆ ನಿರ್ಮಾಣ ಹಂತದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com