![ಅನ್ನಭಾಗ್ಯದಿಂದ ಅಪೌಷ್ಟಿಕತೆ ನಿವಾರಣೆ ಅಸಾಧ್ಯ](http://media.assettype.com/kannadaprabha%2Fimport%2F2015%2F3%2F4%2Foriginal%2Fanna-bhagya.jpg?w=480&auto=format%2Ccompress&fit=max)
ಬೆಂಗಳೂರು: ಅನ್ನಭಾಗ್ಯ ಯೋಜನೆ ಬಡವರಿಗೆ ಅನುಕೂಲ ಕಲ್ಪಿಸಿದೆಯಾದರೂ ಯೋಜನೆ ಅನುಷ್ಠಾನದಲ್ಲಿ ಲೋಪರಹಿತವಾಗಿಲ್ಲ ಎಂದು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಯೋಜನೆ ಮೌಲ್ಯಮಾಪನ ಉದ್ದೇಶದಿಂದಲೇ ಇಲಾಖೆ 2013ರಲ್ಲಿ ಮೈಸೂರಿನ ಗ್ರಾಸ್‍ರೂಟ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್ಮೆಂಟ್ ಸಂಸ್ಥೆ (ಗ್ರಾಮ್)ಗೆ ವರದಿ ತಯಾರಿಸುವಂತೆ ಸೂಚಿಸಿತ್ತು. ವರದಿಯಲ್ಲಿ ಅನ್ನಭಾಗ್ಯ ಯೋಜನೆಯಿಂದ ಸಾರ್ವಜನಿಕರಲ್ಲಿ ಪಡಿತರ ವ್ಯವಸ್ಥೆ ಬಗ್ಗೆ ಅರಿವು ಹೆಚ್ಚಿದೆ ಎಂದು ಅಭಿಪ್ರಾಯಪಡಲಾಗಿದೆಯಾದರೂ, ಅಪೌಷ್ಟಿಕತೆ ನಿವಾರಣೆಗೆ ಅಕ್ಕಿ ಮಾತ್ರ ಸಾಲದು ಎಂದು ಹೇಳಲಾಗಿದೆ. ಮಾತ್ರವಲ್ಲ ಇಲಾಖೆಯ ಆಹಾರವಾಣಿ ನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಲಾಗಿದೆ.
ಒಟ್ಟು 836 ಪ್ರತಿಕ್ರಿಯೆಯನ್ನು ಯಾದೃಚ್ಚಿಕ ನಮೂನೆ ವಿಧಾನದ ಮೂಲಕ ಸಂಗ್ರಹಿಸಲಾಗಿದ್ದು, ರಾಜ್ಯದ ನಾಲ್ಕು ವಿಭಾಗಗಳ ತಲಾ ಎರಡು ಜಿಲ್ಲೆಯ 16 ಸ್ಥಳಗಳಿಂದ ಪಡೆಯಲಾಗಿದೆ. ಫಲಾನುಭವಿಗಳು, ಏಜೆಂಟರು ಮತ್ತು ವ್ಯಾಪಾರಸ್ಥರು ಈ ನಮೂನೆಯಲ್ಲಿ ಸೇರಿದ್ದಾರೆ.
ಅಕ್ಕಿಗೆ ಅವಲಂಬನೆ
ಅಧ್ಯಯನ ಸಂದರ್ಭದಲ್ಲಿ ಅಕ್ಕಿ ಅವಲಂಬನೆ ರಾಜ್ಯದಲ್ಲಿ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಿಪಿಎಲ್ ಕಾರ್ಡ್‍ದಾರರಿಗೆ ಅಕ್ಕಿಯನ್ನು ಪ್ರತಿತಿಂಗಳೂ ಪೂರೈಕೆ ಮಾಡುವುದರಿಂದ ಜೋಳ ಮತ್ತು ರಾಗಿಯನ್ನು ಪ್ರಧಾನ ಆಹಾರ ಬೆಳೆಯಾಗಿ ಬಳಸುವವರೂ ಅಕ್ಕಿಗಾಗಿ ಅರಸುವ ಬಗ್ಗೆ ಹೇಳಲಾಗಿದೆ. ಆದರೆ ಅನ್ನವನ್ನು ಮಾತ್ರ ಸೇವಿಸುವುದರಿಂದ ಸರ್ಕಾರದ ಮೂಲ ಉದ್ದೇಶವಾದ ಅಪೌಷ್ಟಿಕತೆ ನಿವಾರಣೆ ಅಸಾಧ್ಯ. ಇದು ಬಡ ವರ್ಗದ ಜನರಲ್ಲಿ ಕುಪೋಷಣೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ.ಹೀಗಾಗಿ ಇನ್ನಷ್ಟು ಶಕ್ತಿದಾಯಕ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ನೀಡುವುದು ಅಗತ್ಯ ಎಂದು ಅಭಿಪ್ರಾಯಪಡಲಾಗಿದೆ.
ಕಾರ್ಮಿಕರ ಕೊರತೆ: ಅನ್ನಭಾಗ್ಯ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಉಂಟಾಗುತ್ತಿದೆ ಎಂಬ ಆರೋಪಕ್ಕೆ ವರದಿಯಲ್ಲೂ ಪುಷ್ಟಿ ದೊರೆತಿದೆ. ಅಕ್ಕಿಯತ್ತ ಒಲವು ಮೂಡುತ್ತಿರುವುದರಿಂದ ರಾಗಿ ಮತ್ತು ಜೋಳ ಬೆಳೆಯುವ ರೈತರಿಗೆ ಇದರಿಂದ ತೊಂದರೆಯಗುತ್ತಿದೆ. ವಾಣಿಜ್ಯ ಬೆಳೆಗಳ ಮೇಲೆ ಇದರಿಂದ ದೂರಗಾಮಿ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಇದರ ಜತೆಗೆ ಗ್ರಾಹಕರ ಸಮಸ್ಯೆ ನಿವಾರಣೆ ಮಾಡಲು ಇಲಾಖೆ ಆರಂಭಿಸಿದ್ದ ಆರೋಗ್ಯ ವಾಣಿ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇಂಥದೊಂದು ಸಹಾಯವಾಣಿ ಇದೆ ಎಂಬ ಬಗ್ಗೆ ಗ್ರಾಹಕರಲ್ಲಿ ಮಾಹಿತಿಯೇ ಇಲ್ಲ. ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಿದರೆ ಸ್ವೀಕರಿಸುವುದಕ್ಕೂ ಜನ ಇರುವುದಿಲ್ಲ ಎಂದು
ಹೇಳಲಾಗಿದೆ. ಜತೆಗೆ ಆಹಾರ ಪರೀಕ್ಷಕರು ಕಾಲಕಾಲಕ್ಕೆ ಪರಿಶೀಲನೆ ಕಾರ್ಯ ನಡೆಸುತ್ತಿಲ್ಲ ಎಂದು ಹೇಳಿದೆ. ವರದಿಯಲ್ಲಿ ಹೇಳಿದ ಲೋಪಗಳನ್ನು ಇಲಾಖೆ ಸರಿಪಡಿಸಿಕೊಳ್ಳುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಈ ಸಂದರ್ಭದಲ್ಲಿ ಸುದ್ದಿಗಾರರಿಗೆತಿಳಿಸಿದರು.
ಕಾಳಸಂತೆಯಲ್ಲಿ ಅಕ್ಕಿ ಮಾರಾಟ
ಅನ್ನಭಾಗ್ಯದ ಅಕ್ಕಿ ಸಾರ್ವಜನಿಕವಾಗಿಯೇ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ ಎಂಬ ಆರೋಪಕ್ಕೆ ಗ್ರಾಮ್ ವರದಿಯಲ್ಲಿ ಸಾಕ್ಷ್ಯ ದೊರೆತಿದೆ. ಅಧ್ಯಯನ ತಂಡದ ಸದಸ್ಯರು ರೋಣ ಮತ್ತು ಗಂಗಾವತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜಾರೋಷವಾಗಿಯೇ ಅನ್ನಭಾಗ್ಯ ಯೋಜನೆಯಲ್ಲಿ ಖರೀದಿಸಿದ ಅಕ್ಕಿಯನ್ನು ರು.10 ಪ್ರತಿ ಕೆಜಿಯಂತೆ
ಮಾರುತ್ತಿದ್ದರು.
ಆಹಾರ ವಿತರಣಾ ವ್ಯವಸ್ಥೆಯಲ್ಲಿನ ಮಾಫಿಯಾದವರು ಇದೇ ಅಕ್ಕಿಯನ್ನು ಮುಂದೆ ಇನ್ನೂ ಹೆಚ್ಚಿನ ದರಕ್ಕೆ ರಾಜ್ಯ ಸರ್ಕಾರಕ್ಕೆ ಮಾರುತ್ತಿದ್ದಾರೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ನ್ಯಾಯಬೆಲೆ ಅಂಗಡಿಯಿಂದ ಅನತಿ ದೂರದಲ್ಲಿ ಇಂಥ ಕಳ್ಳವ್ಯಾಪಾರಿಗಳು ಗೋಣಿ ಚೀಲ ಹಿಡಿದು ಕುಳಿತಿರುತ್ತಾರೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಖರೀದಿಸಿದ ವ್ಯಕ್ತಿ ತನಗೆ ಅಗತ್ಯಕ್ಕಿಂತ ಹೆಚ್ಚಾದ ಅಕ್ಕಿಯನ್ನು ಈತನಿಗೆ ಮಾರುತ್ತಾನೆ. ರಾಜ್ಯದ ಹಲವು ಭಾಗಗಳಲ್ಲಿ ಇಂಥ ಭ್ರಷ್ಟಾಚಾರ ಬಹಿರಂಗವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ ಎಂದು ಸಲಹೆ ನೀಡಲಾಗಿದೆ.
Advertisement