ಬೆಂಗಳೂರು: ಟ್ಯಾಕ್ಸಿ ಫಾರ್ ಶ್ಯೂರ್ ಸಂಸ್ಥೆ ಯನ್ನು ರು.1260 ಕೋಟಿ ನೀಡಿ ಬಹು ರಾಷ್ಟ್ರೀಯ ಸಂಸ್ಥೆ ಓಲಾ ಖರೀದಿಸಿದ ಬೆನ್ನಲ್ಲೇ ದೇಶೀಯ ಟ್ರಾವೆಲ್ ಸಂಸ್ಥೆಗಳು ಬೆಚ್ಚಿ ಬಿದ್ದಿವೆ.
ಇದರಿಂದ ಬೆಂಗಳೂರು ಕೇಂದ್ರೀಕೃತವಾದ ಸುಮಾರು 220 ಟ್ರಾವೆಲ್ ಏಜೆನ್ಸಿಗಳು ಆತಂಕಕ್ಕೆ ಒಳಗಾಗಿದ್ದು, ಸಾರಿಗೆ ಸಚಿವಾಲಯದ ಪ್ರಭಾವಿಯೊಬರು ಈ ಡೀಲ್‍ಗೆ ಮಧ್ಯವರ್ತಿಯಾಗಿದ್ದರು ಎಂಬ ಗುಮಾನಿ ಈ ವಲಯದಲ್ಲಿ ಮೂಡಿದೆ. ಆ್ಯಪ್ ಆಧಾರಿತ ಟ್ರಾವೆಲ್ಸ್ ಗಳಿಗೂ ಮೋಟಾರು ವಾಹನ ಕಾಯ್ದೆ ಅನ್ವಯ ನಿಯಂತ್ರಣ ಹೇರಬೇಕೆಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿ 2 ತಿಂಗಳು ಕಳೆಯುವಷ್ಟರಲ್ಲೇ ಓಲಾ ಓಲಾಟ ಹೆಚ್ಚಿರುವುದು ಟ್ರಾವೆಲ್ ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ¸ ಸ್ಥಳೀಯ ಟ್ರಾವೆಲ್ಸ್ ಮಾಲೀಕರು ಮತ್ತು ಏಜೆಂಟರುಗಳ ಸಂಘ ತನ್ನ ತುರ್ತು ಕಾರ್ಯಕಾರಿ ಸಭೆಯನ್ನು ಕರೆದಿದ್ದು, ಹೈಕೋರ್ಟ್ ಆದೇಶದ ಪ್ರಕಾರ ಮೊಬೈಲ್ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಗಳಿಗೆ ಮೋಟಾರು ವಾಹನ ಕಾಯ್ದೆ ನಿಯಮಗಳನ್ನು ಅನ್ಯಯಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ.
ಆ್ಯಪ್ ನಿಯಂತ್ರಣಕ್ಕೆ ಆಪ್ ಮಾದರಿ
ದೆಹಲಿಯಲ್ಲಿ ನಡೆದ ಕೆಲ ಘಟನೆಗಳ ಹಿನ್ನೆಲೆಯಲ್ಲಿ ಆ್ಯಪ್ ಆಧಾರಿತ ಟ್ರಾವೆಲ್ ಸಂಸ್ಥೆಗಳಿಗೆ ಮೋಟಾರು ವಾಹನ ಕಾಯ್ದೆ ನಿಯಮ ಅನ್ವಯ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು. ತಾವು ಅಧಿಕಾರಕ್ಕೆ ಬಂದರೆ ಈ ನಿಯಮ ಜಾರಿಗೆತರುವುದಾಗಿ ಆಪ್ ಕಳೆದ ಚುನಾವಣೆಯಲ್ಲಿ ಭರವಸೆ ನೀಡಿತ್ತು. ಈಗ ದೆಹಲಿಯಲ್ಲಿ ಆಪ್ ಅಧಿಕಾರಕ್ಕೆ ಬಂದಿದ್ದು ಇನ್ನು 15 ದಿನದಲ್ಲಿ ಮಾರ್ಗದರ್ಶಿ ಸೂತ್ರ ಅಳವಡಿಸಿಕೊಳ್ಳದಿದ್ದರೆ ಜಾಗ ಖಾಲಿ ಮಾಡಿಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನು ರಾಜ್ಯದಲ್ಲೂ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘ ನಿರ್ಧರಿಸಿದೆ.
ಟ್ಯಾಕ್ಸಿ ಫಾರ್ ಶ್ಯೂರ್ ಸಂಸ್ಥೆಯನ್ನು ಓಲಾ ಖರೀದಿ ಮಾಡುವುದಕ್ಕೆ ಮುನ್ನವೇ ರಾಜ್ಯದಲ್ಲಿ ಆ್ಯಪ್ ಆಧರಿತ ಸಂಸ್ಥೆಗಳ ನಿಂಯತ್ರಣಕ್ಕೆ ಕ್ರಮ ತೆಗೆದಕೊಳ್ಳುವಂತೆ ಜ.20 ರಂದು ರಾಜ್ಯ ಹೈಕೋರ್ಟ್ ಆದೇಶ ನೀಡಿತ್ತು. ಕರ್ನಾಟಕ ಮೋಟಾರು ವಾಹನ ಕಾಯ್ದೆ - 1998ರ ಪ್ರಕಾರ ಕೆಎಸ್ ಟಿಡಿಸಿ, ಮೇರು, ಮೆಗಾ ಸರ್ವಿಸ್ ಗಳಿಗೆ ಯಾವೆಲ್ಲ ನಿಯಮಗಳು ಅನ್ವಯವಾಗುತ್ತದೋ ಅದನ್ನು ಆ್ಯಪ್ ಆಧಾರಿತ ಸಂಸ್ಥೆಗಳೂ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು.
ಹೀಗಾಗಿ 25 ಕಟ್ಟು ಪಾಡುಗಳು ಇಂಥ ಸಂಸ್ಥೆಗೆ ಅನ್ವಯವಾಗುತ್ತದೆ. ಆದರೆ ಹೈಕೋರ್ಟ್ ಆದೇಶವಿದ್ದರೂ ಇನ್ನೂ ಜಾರಿಗೆ ಮುಂದಾಗಿಲ್ಲ. ಇದರಿಂದಾಗುವ ಅನಾಹುತವನ್ನು ಮೊದಲೇ ಗ್ರಹಿಸಿರುವ ದೇಶೀಯ ಟ್ರಾವೆಲ್ ಸಂಸ್ಧೆಗಳು ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲ್ಲ. ಇದರ ಜತೆಗೆ ಓಲಾ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಹಲವು ಆಫರ್ ನೀಡುತ್ತಿದೆ. ಇದರಿಂದ ದೇಶೀಯ ಸಂಸ್ಥೆಗಳು ಭವಿಷ್ಯ ಸಂದಿಗ್ಧದಲ್ಲಿದೆ.
Advertisement