ಪಂಚಭೂತಗಳಲ್ಲಿ ಪ್ರಭಾ ಲೀನ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ ಅರುಣ್ ಕುಮಾರ್ ಶೆಟ್ಟಿ ಅವರ ಅಂತ್ಯಸಂಸ್ಕಾರ ಅವರು ಆಡಿ ಬೆಳೆದ ಅಮ್ಟೂರು ನಂದಗೋಕುಲದ ಅಂಗಳದಲ್ಲೇ ಭಾನುವಾರ ನೂರಾರು ಜನರ ಅಶ್ರುತರ್ಪಣದ ಮಧ್ಯೆ ನೆರವೇರಿತು...
ಪಂಚಭೂತಗಳಲ್ಲಿ ಲೀನರಾದ ಪ್ರಭಾ ಅರುಣ್ ಕುಮಾರ್
ಪಂಚಭೂತಗಳಲ್ಲಿ ಲೀನರಾದ ಪ್ರಭಾ ಅರುಣ್ ಕುಮಾರ್

ಬಂಟ್ವಾಳ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ ಅರುಣ್ ಕುಮಾರ್ ಶೆಟ್ಟಿ ಅವರ ಅಂತ್ಯಸಂಸ್ಕಾರ ಅವರು ಆಡಿ ಬೆಳೆದ ಅಮ್ಟೂರು ನಂದಗೋಕುಲದ ಅಂಗಳದಲ್ಲೇ ಭಾನುವಾರ ನೂರಾರು ಜನರ ಅಶ್ರುತರ್ಪಣದ ಮಧ್ಯೆ ನೆರವೇರಿತು.

ಬೆಂಗಳೂರಿನ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತಂದು, ಅಲ್ಲಿಂದ ಮ.12ಕ್ಕೆ ಹುಟ್ಟೂರಾದ ಕಲ್ಲಡ್ಕ ಸಮೀಪದ ಅಮ್ಟೂರು ಗ್ರಾಮದ `ನಂದಗೋಕುಲ'ಕ್ಕೆ ತರಲಾಯಿತು. ಪ್ರಭಾ ಶೆಟ್ಟಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬೆಳಗ್ಗಿನಿಂದಲೇ ನಂದಗೋಕುಲಕ್ಕೆ ಜನರ ದಂಡು ಹರಿದುಬರತೊಡಗಿತ್ತು. ಸಂಬಂಧಿಕರು, ಸಹಪಾಠಿಗಳು, ಸ್ನೇಹಿತರು, ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬಂಟರ ಸಂಘದ ಪದಾಧಿಕಾರಿಗಳು ನೆರೆದಿದ್ದರು. ಅಂತ್ಯಸಂಸ್ಕಾರದ ಮೊದಲಿನ ವಿಧಿವಿಧಾನಕ್ಕೆ ಮುನ್ನ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಂಜೆ 6 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಪತಿ ಅರುಣ್‍ಕುಮಾರ್ ಹಾಗೂ ಸಹೋದರ ಶಂಕರ್ ಶೆಟ್ಟಿ ಚಿತೆಗೆ ಅಗ್ನಿಸ್ಪರ್ಶ ನೀಡಿದರು. ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್, ತಹಸೀಲ್ದಾರ್ ಪುರಂದರ ಹೆಗ್ಡೆ , ಮಹಮ್ಮದ್ ಇಸಾಖ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಪ್ರಭಾ ಶೆಟ್ಟಿ ಅವರ ಆತ್ಮಕ್ಕೆ ಶಾಂತಿಕೋರಿ ಕರಿಂಗಾನ, ಅಮ್ಟೂರು ಸಂತ ಅಂತೋನಿಯರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬೆಂಗಳೂರು ವರದಿ: ನಗರದ ಚಂದ್ರಾ ಬಡಾವಣೆಯಲ್ಲಿ ಭಾನುವಾರ ಬೆಳಗ್ಗೆ ರಾಜಕೀಯ ಮುಖಂಡರೂ ಸೇರಿದಂತೆ ನೂರಾರು ಮಂದಿ ಪ್ರಭಾ ಅವರ ಅಂತಿಮ ದರ್ಶನ ಪಡೆದರು. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸುರಕ್ಷೆ ಬಗ್ಗೆ ಈ ಸಂದರ್ಭದಲ್ಲಿ ಹಲವರು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಅನಂತಕುಮಾರ್, ಗೃಹ ಸಚಿವ ಕೆ.ಜೆ.ಜಾರ್ಜ್, ಸಂಸದೆ ಶೋಭಾ ಕರಂದ್ಲಾಜೆ ಅವರೂ ಅಂತಿಮ ದರ್ಶನ ಪಡೆದರು. ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ವಿದೇಶಾಂಗ ಇಲಾಖೆಗೆ ಮನವಿ ಮಾಡಲಾಗಿದ್ದು ಆಸ್ಟ್ರೇಲಿಯಾ ಸರ್ಕಾರದಿಂದ ನ್ಯಾಯ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಪಾರ್ಥಿವ ಶರೀರವನ್ನು 4 ತಾಸು ಅಂತಿಮ ದರ್ಶನಕ್ಕೆ ಇಟ್ಟು ಬಳಿಕ ಎಚ್‍ಎಎಲ್ ಏರ್‍ಪೊರ್ಟ್‍ನಿಂದ ವಿಮಾನದಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಯಿತು.

ವಾರದ ನಂತರ ತಿಳಿಸಿದರು!

ಅಮ್ಮ ಜೀವಂತವಾಗಿ ಉಳಿದಿಲ್ಲ ಎನ್ನುವ ವಿಷಯವನ್ನು ಪ್ರಭಾ ಮೃತಪಟ್ಟ ಒಂದು ವಾರದ ನಂತರ 9 ವರ್ಷದ ಮಗಳು ಮೇಘನಾಳಿಗೆ ತಿಳಿಸಲಾಗಿತ್ತು. ದುಃಖ ಉಮ್ಮಳಿಸಿ ಬರುತ್ತಿದ್ದರೂ ಭಾನುವಾರ ತಾಯಿಯ ಪಾರ್ಥಿವ ಶರೀರದ ಮುಂದೆ ನಿಂತಿದ್ದ ಮೇಘನಾ ಕಣ್ಣೀರು ಹಾಕಲಿಲ್ಲ. ಸೇರಿದವರು ಆಕೆಯನ್ನು ಸಮಾಧಾನಪಡಿಸುತ್ತಿದ್ದರು.

ಶನಿವಾರ ರಾತ್ರಿಯೇ ಕಣ್ಣೀರಿಟ್ಟಿದ್ದ ಆಕೆ ಕೆಲ ಹೊತ್ತು ಮಾತ್ರ ಶವದ ಬಳಿ ಇದ್ದಳು. ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲಾಯಿತು. ಸಿಡ್ನಿಗೆ ತೆರಳಿದ ಪತಿ ಅರುಣ್, ಪಾರ್ಥಿವ ಶರೀರವನ್ನು ಶನಿವಾರ ರಾತ್ರಿ ಬೆಂಗಳೂರಿಗೆ ತಂದಿದ್ದರು. ಕಳೆದ ಒಂದು ವಾರದಿಂದ ಮನೆಯಲ್ಲಿ ಏನೋ ನಡೆಯುತ್ತಿದೆ ಎಂದು ಮೇಘನಾಳಿಗೆ ಅನುಮಾನವಿತ್ತು. ಆದರೂ ಶಾಂತಳಾಗಿದ್ದಳು. ಶನಿವಾರ ರಾತ್ರಿ ತಂದೆ ಅರುಣ್ ಎಲ್ಲ ವಿಷಯ ತಿಳಿಸಿದಾಗ ತುಂಬಾ ಅತ್ತಿದ್ದಳು ಎಂದು ಪ್ರಭಾ ಅವರ ಸಂಬಂಧಿ ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com